ADVERTISEMENT

ಬಿಜೆಪಿ ಮುಖಂಡ ಸಂತೋಷ್‌ಗೆ ನೋಟಿಸ್: ಎಸ್‌ಐಟಿಗೆ ತೆಲಂಗಾಣ ಹೈಕೋರ್ಟ್‌ ಸೂಚನೆ

ಬಿಆರ್‌ಎಸ್‌ ಶಾಸಕರ ಖರೀದಿಗೆ ಯತ್ನಿಸಿದ ಆರೋಪ

ಪಿಟಿಐ
Published 23 ನವೆಂಬರ್ 2022, 15:51 IST
Last Updated 23 ನವೆಂಬರ್ 2022, 15:51 IST

ಹೈದರಾಬಾದ್: ಭಾರತ ರಾಷ್ಟ್ರ ಸಮಿತಿಯ (ಬಿಆರ್‌ಎಸ್‌) ಶಾಸಕರನ್ನು ಖರೀದಿಸಲು ಯತ್ನಿಸಲಾಗಿತ್ತು ಎಂಬ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಅವರಿಗೆ ಮತ್ತೊಮ್ಮೆ ನೋಟಿಸ್‌ ನೀಡುವಂತೆ ತೆಲಂಗಾಣ ಹೈಕೋರ್ಟ್ ಎಸ್‌ಐಟಿಗೆ ಬುಧವಾರ ನಿರ್ದೇಶಿಸಿದೆ.

ವಿಚಾರಣೆಗಾಗಿ ನ.21ರಂದು ತನ್ನ ಮುಂದೆ ಹಾಜರಾಗುವಂತೆ ವಿಶೇಷ ತನಿಖಾ ತಂಡವು (ಎಸ್‌ಐಟಿ), ಸಂತೋಷ್ ಹಾಗೂ ಇತರರಿಗೆ ನೋಟಿಸ್‌ ಜಾರಿ ಮಾಡಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.

‘ಎಸ್ಐಟಿ ಮುಂದೆ ಹಾಜರಾಗುವಂತೆ ಸಂತೋಷ್‌ ಅವರಿಗೆ ನೋಟಿಸ್‌ ನೀಡಲಾಗಿತ್ತು. ಪೂರ್ವನಿರ್ಧರಿತ ಪ್ರವಾಸ ಕಾರ್ಯಕ್ರಮಗಳಿಂದಾಗಿ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡುವಂತೆ ಅವರು ಕೇಳಿದ್ದರು’ ಎಂದು ತೆಲಂಗಾಣದ ಅಡ್ವೊಕೇಟ್ ಜನರಲ್ ಬಿ.ಎಸ್‌.ಪ್ರಸಾದ್‌ ಅವರು ಕೋರ್ಟ್‌ಗೆ ತಿಳಿಸಿದರು.

ADVERTISEMENT

ವಾದ ಆಲಿಸಿದ ನ್ಯಾಯಮೂರ್ತಿಗಳು, ‘ಎಸ್ಐಟಿ ಮುಂದೆ ಹಾಜರಾಗಲು ಸಂತೋಷ್ ಅವರಿಗೆ ನ್ಯಾಯಸಮ್ಮತವಾದ ಕಾಲಾವಕಾಶ ಒದಗಿಸಿ, ಹೊಸದಾಗಿ ನೋಟಿಸ್‌ ಜಾರಿ ಮಾಡಿ’ ಎಂದು ಸೂಚಿಸಿ, ವಿಚಾರಣೆಯನ್ನು ನ. 29ಕ್ಕೆ ಮುಂದೂಡಿದರು.

ಇದೇ ಪ್ರಕರಣಕ್ಕೆ ಸಂಬಂಧಿಸಿ, ವಕೀಲರೊಬ್ಬರು ಎಸ್‌ಐಟಿ ಎದುರು ಹಾಜರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.