ADVERTISEMENT

‘ಮಹಿಳಾ ಅಭ್ಯರ್ಥಿಗಳಿಗೆ ವಿದ್ಯುತ್‌ ಕಂಬ ಏರುವ ಪರೀಕ್ಷೆ ನಡೆಸಿ’

ಪಿಟಿಐ
Published 3 ಡಿಸೆಂಬರ್ 2020, 16:06 IST
Last Updated 3 ಡಿಸೆಂಬರ್ 2020, 16:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್‌: ಕಿರಿಯ ಲೈನ್‌ಮ್ಯಾನ್‌ ಹುದ್ದೆಗೆ ಲಿಖಿತ ಪರೀಕ್ಷೆ ಬರೆದು ತೇರ್ಗಡೆಯಾದ ಇಬ್ಬರು ಮಹಿಳಾ ಅಭ್ಯರ್ಥಿಗಳಿಗೆ, ವಿದ್ಯುತ್‌ ಕಂಬ ಏರುವ ಪರೀಕ್ಷೆಯನ್ನು ನಡೆಸುವಂತೆ ರಾಜ್ಯ ವಿದ್ಯುತ್‌ ಸರಬರಾಜು ಕಂಪನಿಗೆ ತೆಲಂಗಾಣ ಹೈಕೋರ್ಟ್‌ ನಿರ್ದೇಶಿಸಿದೆ.

ವಿದ್ಯುತ್‌ ಕಂಬವನ್ನು ಸುಲಭವಾಗಿ ಏರುವ ಸಾಮರ್ಥ್ಯವಿಲ್ಲ ಎನ್ನುವ ಕಾರಣವನ್ನು ನೀಡಿ ಇಬ್ಬರು ಮಹಿಳಾ ಅಭ್ಯರ್ಥಿಗಳಿಗೆ ಲೈನ್‌ಮ್ಯಾನ್‌ ಉದ್ಯೋಗವನ್ನು ಕಂಪನಿ ನಿರಾಕರಿಸಿತ್ತು. ವಿ.ಭಾರತಿ ಹಾಗೂ ಬಿ.ಶಿರೀಶ ಎಂಬುವವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಸಿಂಗ್‌ ಚೌಹಾಣ್‌, ನ್ಯಾಯಮೂರ್ತಿ ಬಿ.ವಿಜಯ್‌ಸೇನ್‌ ರೆಡ್ಡಿ ಅವರಿದ್ದ ವಿಭಾಗೀಯ ಪೀಠವು, ‘ಮಹಿಳೆಯನ್ನು ಸೇನೆಗೇ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಉಲ್ಲೇಖಿಸಿತು.

‘ಇಬ್ಬರು ಅಭ್ಯರ್ಥಿಗಳಿಗೆ ಎರಡು ವಾರದೊಳಗಾಗಿ ವಿದ್ಯುತ್‌ ಕಂಬ ಏರುವ ಪರೀಕ್ಷೆ ನಡೆಸಿ, ಅರ್ಜಿಯ ವಿಚಾರಣೆ ನಡೆಸುತ್ತಿರುವ ಏಕಸದಸ್ಯ ಪೀಠಕ್ಕೆ ಪರೀಕ್ಷೆಯ ಫಲಿತಾಂಶವನ್ನು ಸಲ್ಲಿಸಬೇಕು’ ಎಂದು ಪೀಠವು ತಿಳಿಸಿತು. ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠವು, ಭವಿಷ್ಯದಲ್ಲಿ ವಿದ್ಯುತ್‌ ಕಂಬ ಏರುವ ಪರೀಕ್ಷೆ ನಡೆಸಿದರೆ ಈ ಇಬ್ಬರು ಮಹಿಳಾ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಬೇಕು ಎಂದು ಕಂಪನಿಗೆ ಆದೇಶಿಸಿತ್ತು. ಈ ಪರೀಕ್ಷೆಯನ್ನು ನಿಗದಿತ ಸಮಯದೊಳಗೇ ನಡೆಸಲು ಸೂಚಿಸಬೇಕು ಎಂದು ಕೋರಿ ಅಭ್ಯರ್ಥಿಗಳು ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.