ಎಸ್‌ಎಲ್‌ಬಿಸಿ ಸುರಂಗದಿಂದ ಮೃತದೇಹ ಹೊರತೆಗೆದ ರಕ್ಷಣಾ ಸಿಬ್ಬಂದಿ
X/@sudhirjourno
ನಾಗರಕರ್ನೂಲ್ (ತೆಲಂಗಾಣ): ಭಾಗಶಃ ಕುಸಿದಿರುವ ಶ್ರೀಶೈಲಂ ಎಡದಂಡೆ ಕಾಲುವೆಯ(ಎಸ್‌ಎಲ್‌ಬಿಸಿ) ಸುರಂಗದಡಿ ಸಿಲುಕಿರುವ 8 ಮಂದಿ ಕಾರ್ಮಿಕರ ಪತ್ತೆಗಾಗಿ 2 ವಾರಗಳಿಗೂ ಹೆಚ್ಚು ಕಾಲ ಶೋಧ ನಡೆಸುತ್ತಿದ್ದ ರಕ್ಷಣಾ ತಂಡಗಳು ಇಂದು( ಭಾನುವಾರ) ಒಬ್ಬನ ಮೃತದೇಹವನ್ನು ಪತ್ತೆಹಚ್ಚಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಾಗರಕರ್ನೂಲ್ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.
48 ಗಂಟೆಗಳಿಗೂ ಹೆಚ್ಚು ಕಾಲ ಬಹಳ ಎಚ್ಚರಿಕೆಯಿಂದ ಅಗೆದು ಶವವನ್ನು ಹೊರತೆಗೆಯಲಾಗಿದೆ. ಸುಮಾರು 10 ಅಡಿ ಆಳದಲ್ಲಿ ಹೂಳಿನ ಅಡಿಯಲ್ಲಿ ಶವ ಹೂತುಹೋಗಿತ್ತು. ಮೃತರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾರ್ಮಿಕರ ಪತ್ತೆಗಾಗಿ ಭಾನುವಾರ ಶ್ವಾನದಳವನ್ನು ಬಳಸಲಾಯಿತು. ಕೇರಳ ಪೊಲೀಸ್ ಇಲಾಖೆಯಲ್ಲಿನ ಬೆಲ್ಜಿಯನ್ ಮಲಿನೋಸ್ ಜಾತಿಯ ನಾಯಿಗಳು ಸುಮಾರು 15 ಅಡಿ ಆಳದಲ್ಲಿನ ವಾಸನೆಯನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದ್ದು, ಅವುಗಳು ಗುರುತಿಸುವ ಸ್ಥಳಗಳಲ್ಲಿ ಗುಂಡಿ ತೋಡಲಾಗುತ್ತಿದೆ. ಸದ್ಯ ಒಬ್ಬರ ಮೃತದೇಹ ಪತ್ತೆಯಾಗಿದ್ದು, ಉಳಿದ ಕಾರ್ಮಿಕರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.
ಫೆಬ್ರುವರಿ 22ರಂದು ಶ್ರೀಶೈಲಂ ಎಡದಂಡೆ ಕಾಲುವೆ ಯೋಜನೆಯ ಸುರಂಗದ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಸುಮಾರು 8 ಮಂದಿ ಕಾರ್ಮಿಕರು ಸಿಲುಕಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.