ADVERTISEMENT

ತೆಲಂಗಾಣ ಸುರಂಗ ಕುಸಿತ: ಸಿಲುಕಿರುವವರ ಸಮೀಪಕ್ಕೆ ತಲುಪಿದ ರಕ್ಷಣಾ ತಂಡ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 5:33 IST
Last Updated 23 ಫೆಬ್ರುವರಿ 2025, 5:33 IST
   

ಹೈದರಾಬಾದ್: ಶ್ರೀಶೈಲಂ ಎಡದಂಡೆ ಕಾಲುವೆ ಯೋಜನೆಯ ಸುರಂಗದ ಒಂದು ಭಾಗ ಕುಸಿದು 24 ಗಂಟೆಗಳು ಕಳೆದಿದ್ದು, ಸುರಂಗದೊಳಗೆ ಸಿಕ್ಕಿಬಿದ್ದ ಎಂಜಿನಿಯರ್‌ಗಳು ಮತ್ತು ಕಾರ್ಮಿಕರಿಗೆ ರಕ್ಷಣಾ ಕಾರ್ಯಾಚರಣಾ ತಂಡ ಹತ್ತಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಧಾನಿ ಹೈದರಾಬಾದ್‌ನಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ನಾಗರ್‌ಕರ್ನೂಲ್ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ 8.30ರ ಸುಮಾರಿಗೆ ಅಪಘಾತ ಸಂಭವಿಸಿದೆ.

ರಕ್ಷಣಾ ಕಾರ್ಯಾಚರಣೆಯ ಸಿಬ್ಬಂದಿ, ದುರ್ಘಟನೆ ಸಂಭವಿಸಿದ ಸ್ಥಳದಿಂದ ಸ್ವಲ್ಪ ದೂರದಲ್ಲಿರುವ ಸುರಂಗದ ಒಳಗಿನ 13ನೇ ಕಿ.ಮೀ ವರೆಗೆ ತಲುಪಲು ಸಾಧ್ಯವಾಗಿದೆ.

ADVERTISEMENT

ಅಧಿಕೃತ ಮೂಲಗಳ ಪ್ರಕಾರ, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ರಾಜ್ಯ ಸಚಿವರಾದ ಎನ್ ಉತ್ತಮ್ ಕುಮಾರ್ ರೆಡ್ಡಿ ಮತ್ತು ಜೆ ಕೃಷ್ಣರಾವ್ ಸ್ಥಳಕ್ಕೆ ತೆರಳಿದ್ದಾರೆ.

‘ರಕ್ಷಣಾ ಕಾರ್ಯಾಚರಣೆಯ ತಂಡವು ಕಬ್ಬಿಣ, ಮಕ್ ಮತ್ತು ಸಿಮೆಂಟ್ ಬ್ಲಾಕ್‌ಗಳಿಂದ ತುಂಬಿದ ಅವಶೇಷಗಳನ್ನು ತೆರವುಗೊಳಿಸಬೇಕಾಗುತ್ತದೆ. ತಂಡಗಳು ಕುಸಿತ ಸಂಭವಿಸಿದ ಸಮೀಪದ 13ನೇ ಕಿಮೀ ವರೆಗೆ ತಲುಪಲು ಸಾಧ್ಯವಾಗಿದೆ. ಶನಿವಾರ ಸುರಂಗ ಕೊರೆಯುವ ಯಂತ್ರವನ್ನು ಕೊನೆಯದಾಗಿ ಇರಿಸಲಾಗಿದ್ದ ಸ್ಥಳದಲ್ಲಿ ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಿದ್ದಾರೆ’ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಎಂಟು ಮಂದಿಯಲ್ಲಿ ಆರು (ಇಬ್ಬರು ಎಂಜಿನಿಯರ್‌ಗಳು ಮತ್ತು ನಾಲ್ವರು ಕಾರ್ಮಿಕರು) ಜೈಪ್ರಕಾಶ್ ಅಸೋಸಿಯೇಟ್ಸ್‌ಗೆ ಸೇರಿದವರು ಮತ್ತು ಇಬ್ಬರು ಅಮೆರಿಕ ಕಂಪನಿಯ ಉದ್ಯೋಗಿಗಳಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರಿಗೆ ಕರೆ ಮಾಡಿ ಘಟನೆಯ ಬಗ್ಗೆ ವಿಚಾರಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಕೇಂದ್ರದಿಂದ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸೇನಾ ಸಿಬ್ಬಂದಿ ಮತ್ತು ಕಂಪನಿಯ ಉದ್ಯೋಗಿಗಳು ಭಾಗವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.