ಪದ್ಮಶ್ರೀ ಪುರಸ್ಕೃತ ತೆಲಂಗಾಣದ ಟ್ರೀ ಮ್ಯಾನ್ ವನಜೀವಿ ರಾಮಯ್ಯ ನಿಧನ
ಹೈದರಾಬಾದ್: ಪದ್ಮಶ್ರೀ ಪುರಸ್ಕೃತ ಹಾಗೂ ‘ಟ್ರೀ ಮ್ಯಾನ್’ ಎಂದೇ ಹೆಸರುವಾಸಿಯಾಗಿದ್ದ, ತೆಲಂಗಾಣದ ಕಮ್ಮಂ ಜಿಲ್ಲೆಯ ರಾಮಯ್ಯ (ವನಜೀವಿ ರಾಮಯ್ಯ) (87) ಅವರು ಶನಿವಾರ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರೆಡ್ಡಿಪಳ್ಳಿ ಗ್ರಾಮದ ನಿವಾಸದಲ್ಲಿ ಅವರಿಗೆ ಹೃದಯಾಘಾತವಾಗಿತ್ತು ಎಂದು ಹೇಳಿವೆ.
ಕಳೆದ ಹಲವು ದಶಕಗಳಿಂದ ಒಂದು ಕೋಟಿಗೂ ಅಧಿಕ ಸಸಿಗಳನ್ನು ನೆಟ್ಟಿದ್ದ ಅವರ ಸಾಮಾಜ ಸೇವೆಯನ್ನು ಪರಿಗಣಿಸಿ 2017ರಲ್ಲಿ ಪದ್ಮಶ್ರೀ ಪುರಸ್ಕಾರವನ್ನು ಅವರಿಗೆ ನೀಡಲಾಗಿತ್ತು.
ರಾಮಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ‘ಇದು ಭರಿಸಲಾಗದ ನಷ್ಟ. ರಾಮಯ್ಯ ಅವರು ತಮ್ಮ ಜೀವನವನ್ನು ಪರಿಸರಕ್ಕಾಗಿ ಮೀಸಲಿಡುವ ಮೂಲಕ ಇಂದಿನ ಯುವಜನತೆಗೆ ಮಾದರಿಯಾಗಿದ್ದಾರೆ’ ಎಂದು ಕಂಬನಿ ಮಿಡಿದಿದ್ದಾರೆ.
ಕೇಂದ್ರ ಸಚಿವರಾದ ಜಿ.ಕಿಶನ್ ರೆಡ್ಡಿ, ಬಂಡಿ ಸಂಜಯ್ ಕುಮಾರ್ ಮತ್ತು ಬಿಆರ್‌ಎಸ್ ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ ಸೇರಿ ಹಲವರು ರಾಮಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.