ಬಿಹಾರ ರಾಜಧಾನಿ ಪಟ್ನಾ ಸಮೀಪದ ಡೆಹರಿ–ಆನ್–ಸೋನ್‌ನಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ಯರ ಸಮಾವೇಶದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಆಗಮಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಬೇಗುಸರಾಯ್‌ನಲ್ಲಿ ಗುರುವಾರ ಸ್ವಾಗತಿಸಿದರು ಪಿಟಿಐ ಚಿತ್ರ
ಡೆಹರಿ–ಆನ್–ಸೋನ್(ಬಿಹಾರ): ‘ಮತ ಕಳ್ಳತನಕ್ಕೆ ಸಂಬಂಧಿಸಿ ‘ಇಂಡಿಯಾ’ ಮೈತ್ರಿಕೂಟ ಸೃಷ್ಟಿಸಿರುವ ‘ಸುಳ್ಳು ಸಂಕಥನ’ಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು’ ಎಂದು ಬಿಜೆಪಿ ಕಾರ್ಯಕರ್ತರಿಗೆ ಕೇಂಧ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಸೂಚನೆ ನೀಡಿದ್ದಾರೆ.
‘ಒಂದು ವೇಳೆ, ಬಿಹಾರದಲ್ಲಿ ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ ಅಧಿಕಾರಕ್ಕೆ ಬಂದಲ್ಲಿ ಒಳನುಸುಳುವಿಕೆ ಸಮಸ್ಯೆ ಹೆಚ್ಚಾಗಲಿದೆ ಎಂಬುದಾಗಿ ಜನರನ್ನು ಎಚ್ಚರಿಸಬೇಕು’ ಎಂದೂ ಶಾ ಸೂಚಿಸಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಡೆಹರಿ–ಆನ್–ಸೋನ್‌ನಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್,ಆರ್‌ಜೆಡಿ ಹಾಗೂ ಎಡಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದ ಶಾ,‘ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟಕ್ಕೆ ಸರಳ ಬಹುಮತವಲ್ಲ, ಮೂರನೇ ಎರಡರಷ್ಟು ಪ್ರಚಂಡ ಬಹುಮತ ಸಿಗಬೇಕು. ಈ ಗುರಿಯೊಂದಿಗೆ ಕಾರ್ಯ ನಿರ್ವಹಿಸಬೇಕು’ ಎಂದು ಕಾರ್ಯಕರ್ತರಿಗೆ ಶಾ ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡಿದ್ದ ‘ಮತದಾರರ ಅಧಿಕಾರ ಯಾತ್ರೆ’ ಪ್ರಸ್ತಾಪಿಸಿದ ಅವರು, ‘ಈ ಯಾತ್ರೆಯ ಉದ್ಧೇಶ ಏನು ಎಂಬುದು ನಿಮಗೆ ಗೊತ್ತು. ಬಾಂಗ್ಲಾದೇಶದಿಂದ ದೇಶದೊಳಗೆ ನುಸುಳಿರುವವರ ರಕ್ಷಣೆಯೇ ಈ ಯಾತ್ರೆಯ ಉದ್ದೇಶವಾಗಿತ್ತು’ ಎಂದರು.
‘ನುಸುಳುಕೋರರಿಗೆ ಮತ ಚಲಾಯಿಸುವ ಹಕ್ಕು ಇರಬೇಕೇ? ಈ ದೇಶದ ನಾಗರಿಕರಿಗೆ ಸಿಗುತ್ತಿರುವ ಎಲ್ಲ ಪ್ರಯೋಜನಗಳೂ ಅವರಿಗೆ ನೀಡಬೇಕೇ’ ಎಂದು ಶಾ ಹೇಳಿದಾಗ, ಕಾರ್ಯಕರ್ತರು, ‘ಇಲ್ಲ’ ಎಂದು ಜೋರು ದನಿಯಲ್ಲಿ ಉತ್ತರಿಸಿದರು.
‘ನುಸುಳುಕೋರರೇ ಕಾಂಗ್ರೆಸ್‌ನ ಮತಬ್ಯಾಂಕ್. ಇದಕ್ಕಾಗಿಯೇ ರಾಹುಲ್ ಗಾಂಧಿ ಹಾಗೂ ಅವರ ಬೆಂಬಲಿಗರು ನುಸುಳುಕೋರರಿಗೆ ಮಣೆ ಹಾಕುತ್ತಾರೆ. ನಮ್ಮ ಯುವಕರಿಗೆ ಮೀಸಲಾದ ಉದ್ಯೋಗಗಳನ್ನು ಅವರಿಗೆ ನೀಡುತ್ತಾರೆ’ ಎಂದು ಶಾ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.