
ಜಬಲಪುರ: ಮಧ್ಯಪ್ರದೇಶದ ಸಿಹೋರಾ ಪಟ್ಟಣದಲ್ಲಿ ಗುರುವಾರ ರಾತ್ರಿ ಎರಡು ಧಾರ್ಮಿಕ ಗುಂಪುಗಳ ನಡುವೆ ಹಿಂಸಾಚಾರ ನಡೆದಿದ್ದು, ಪೊಲೀಸರು 49 ಮಂದಿಯನ್ನು ಬಂಧಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ 40 ಕಿ.ಮೀ ದೂರದಲ್ಲಿರುವ ಸಿಹೋರಾದ ಆಜಾದ್ ಚೌಕದ ಬಳಿ ಮಸೀದಿ ಹಾಗೂ ದುರ್ಗಾ ದೇವಾಲಯ ಎದುರಿನ ಸ್ಥಳದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಹಿಂಸಾಚಾರ ನಡೆದಿದೆ.
‘ದೇವಾಲಯದಲ್ಲಿ ‘ಆರತಿ’ ನಡೆಯುತ್ತಿದ್ದ ಸಮಯದಲ್ಲಿ ಕೆಲವು ಕಿಡಿಗೇಡಿಗಳು ದೇಗುಲದ ಕಬ್ಬಿಣದ ಗೇಟನ್ನು ಮುರಿದು ಕಲ್ಲು ತೂರಾಟ ನಡೆಸಿದ್ದಾರೆ’ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿವೆ.
‘ರಂಜಾನ್ ವಿಶೇಷ ಪ್ರಾರ್ಥನೆ ಮತ್ತು ದೇವಾಲಯದ ಆರತಿ ಏಕಕಾಲದಲ್ಲಿ ನಡೆಯುತ್ತಿದ್ದಾಗ ಈ ಘರ್ಷಣೆ ಸಂಭವಿಸಿದೆ’ ಎಂದು ಸ್ಥಳೀಯ ಮುಸ್ಲಿಮರು ಹೇಳಿದ್ದಾರೆ.
‘ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಪತ್ ಉಪಾಧ್ಯಾಯ ತಿಳಿಸಿದ್ದಾರೆ.
‘ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.