ADVERTISEMENT

ಕೃಷಿ ಕಾಯ್ದೆ ಕುರಿತು ರೈತರೊಂದಿಗೆ 10ನೇ ಸುತ್ತಿನ ಮಾತುಕತೆ ನಡೆಸುತ್ತಿರುವ ಕೇಂದ್ರ

ಏಜೆನ್ಸೀಸ್
Published 20 ಜನವರಿ 2021, 10:40 IST
Last Updated 20 ಜನವರಿ 2021, 10:40 IST
ರೈತರೊಂದಿಗೆ ಮಾತುಕತೆಗೆ ತೆರಳುತ್ತಿರುವ ಮೂವರು ಕೇಂದ್ರ ಸಚಿವರು
ರೈತರೊಂದಿಗೆ ಮಾತುಕತೆಗೆ ತೆರಳುತ್ತಿರುವ ಮೂವರು ಕೇಂದ್ರ ಸಚಿವರು   

ನವದೆಹಲಿ: ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರೊಂದಿಗೆ ಕೇಂದ್ರ ಸರ್ಕಾರದ ಮೂವರು ಸಚಿವರು ಬುಧವಾರ(ಇಂದು) ಮಧ್ಯಾಹ್ನ ಹತ್ತನೇ ಸುತ್ತಿನ ಮಾತುಕತೆ ನಡೆಸುತ್ತಿದ್ದಾರೆ.

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ, ವಾಣಿಜ್ಯ ಮತ್ತು ಆಹಾರ ಸಚಿವ ಪೀಯೂಷ್ ಗೋಯಲ್ ಮತ್ತು ಪಂಜಾಬ್ ಸಂಸದ ಹಾಗೂ ಕೇಂದ್ರ ಖಾತೆ ರಾಜ್ಯ ಸಚಿವ ಸೋಮ್ ಪ್ರಕಾಶ್ ಅವರು ರೈತ ನಾಯಕರ ಜೊತೆಗಿನ ಮಾತುಕತೆಯಲ್ಲಿ ಭಾಗಿಯಾಗಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕಾಯ್ದೆಗಳ ರದ್ದತಿಗೆ ಆಗ್ರಹಿಸಿ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶಗಳ ಸಾವಿರಾರು ರೈತರು ದೆಹಲಿಯ ಗಡಿ ಭಾಗಗಳಲ್ಲಿ ಕಳೆದ ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ADVERTISEMENT

ರೈತರು ಮತ್ತು ಕೇಂದ್ರ ಕೃಷಿ ಸಚಿವಾಲಯದ ನಡುವೆ ಶುಕ್ರವಾರ ನಡೆದ 9ನೇ ಸುತ್ತಿನ ಮಾತುಕತೆ ವಿಫಲವಾಗಿದ್ದ ಹಿನ್ನೆಲೆಯಲ್ಲಿ 10ನೇ ಸುತ್ತಿನ ಮಾತುಕತೆ ನಿಗದಿಯಾಗಿತ್ತು.

ಟ್ರ್ಯಾಕ್ಟರ್‌ ರ್‍ಯಾಲಿ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಕೇಂದ್ರ

ವಿವಿಧ ರೈತ ಸಂಘಟನೆಗಳು ಕೃಷಿ ಕಾಯ್ದೆಗಳ ರದ್ದುಗೊಳಿಸಲು ಒತ್ತಾಯಿಸಿ ಜ.26ರಂದು ನಡೆಸಲು ಉದ್ದೇಶಿಸಿರುವ ‘ಟ್ರ್ಯಾಕ್ಟರ್‌ ರ‍್ಯಾಲಿ‘ಗೆ ತಡೆಯಾಜ್ಞೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿದೆ.

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಜನವರಿ 26ರಂದು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್‌ ರ್‍ಯಾಲಿ ಕುರಿತು ರೈತ ಸಂಘಟನೆಗಳ ಮುಖಂಡರು ಬುಧವಾರ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶದ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.