ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
–ಪಿಟಿಐ
ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು (ಸೋಮವಾರ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿನ ಭದ್ರತೆಯ ಸ್ಥಿತಿಗತಿಯ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ನಲ್ಲಿ ಏಪ್ರಿಲ್ 22ರಂದು ಗುಂಡಿನ ದಾಳಿ ನಡೆಸಿದ್ದ ಉಗ್ರರು, 26 ಮಂದಿಯನ್ನು ಹತ್ಯೆ ಮಾಡಿದ್ದರು. ಇದರ ಬೆನ್ನಲ್ಲೇ, ಉಗ್ರರನ್ನು ಹತ್ತಿಕ್ಕಲು ಭಾರತ ಕಾರ್ಯಾಚರಣೆ ಆರಂಭಿಸಿದೆ.
ಜಾಗತಿಕ ಸಮುದಾಯವೂ ಈ ದಾಳಿಯನ್ನು ಖಂಡಿಸಿವೆ.
ಸಿಂಗ್ ಅವರು ಮೋದಿ ಅವರೊಂದಿಗೆ ಸಭೆ ನಡೆಸಿರುವ ಬಗ್ಗೆ ಈವರೆಗೆ ಅಧಿಕೃತ ಹೇಳಿಕೆಗಳು ಪ್ರಕಟವಾಗಿಲ್ಲ.
'ಮನದ ಮಾತು' ಮಾಸಿಕ ರೇಡಿಯೊ ಕಾರ್ಯಕ್ರಮವನ್ನುದ್ದೇಶಿಸಿ ಭಾನುವಾರ ಮಾತನಾಡಿದ್ದ ಪ್ರಧಾನಿ, ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ. 26 ನಾಗರಿಕರ ಹತ್ಯೆಯ ಹಿಂದಿರುವ ಭಯೋತ್ಪಾದಕರು ಮತ್ತು ಸಂಚುಕೋರರನ್ನು ಹುಡುಕಿ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಪುನರುಚ್ಚರಿಸಿದ್ದರು.
'ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಇಡೀ ಜಗತ್ತು 140 ಕೋಟಿ ಭಾರತೀಯರೊಂದಿಗೆ ನಿಂತಿದೆ. ದಾಳಿಯ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗಲಿದೆ ಎಂಬುದಾಗಿ ಮತ್ತೊಮ್ಮೆ ಭರವಸೆ ನೀಡುತ್ತೇನೆ' ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.