ADVERTISEMENT

ಮದರಸಗಳು ಉಗ್ರರ ತಾಣ: ಉತ್ತರ ಪ್ರದೇಶ ಸಚಿವ ರಘುರಾಜ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 20:30 IST
Last Updated 25 ನವೆಂಬರ್ 2021, 20:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ‘ಮದರಸಗಳು ಉಗ್ರರ ತಾಣಗಳಾಗಿವೆ. ಇವು ಉಗ್ರರನ್ನು ಸಿದ್ಧಪಡಿಸುತ್ತಿವೆ. ಮದರಸದಲ್ಲಿ ಕಲಿತವರು ಉಗ್ರರಾಗಿಯೇ ಹೊರಬರುತ್ತಾರೆ’ ಎಂದು ಉತ್ತರ ಪ್ರದೇಶದ ಕಾರ್ಮಿಕ ಸಚಿವ ರಘುರಾಜ್‌ ಸಿಂಗ್‌ ಹೇಳಿದ್ದಾರೆ.

ರಾಜ್ಯದಲ್ಲಿ ಮೊದಲು 250 ಮದರಸಗಳು ಮಾತ್ರ ಇದ್ದವು. ಈಗ ಅವುಗಳ ಸಂಖ್ಯೆ 22 ಸಾವಿರಕ್ಕೂ ಹೆಚ್ಚು ಎಂದು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಾ ಅವರು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ 2016ರಲ್ಲಿ ಭದ್ರತಾ ಪಡೆಯ ಗುಂಡಿಗೆ ಬಲಿಯಾದ, ಹಿಜ್ಬುಲ್‌ ಮುಜಾಹಿದೀನ್‌ ಭಯೋತ್ಪಾದನಾ ಸಂಘಟನೆಯ ಕಮಾಂಡರ್‌ ಬುರ್ಹಾನ್‌ ವಾನಿ ಕೂಡ ರಾಜ್ಯದ ಮದರಸವೊಂದರ ಉತ್ಪನ್ನ ಎಂದು ಸಿಂಗ್‌ ಹೇಳಿದ್ದಾರೆ.

ಅವಕಾಶ ಸಿಕ್ಕರೆ ಎಲ್ಲ ಮದರಸಗಳನ್ನು ಮುಚ್ಚಿಸಲು ಹಿಂದೇಟು ಹಾಕುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ರಾಜ್ಯದ ಮದರಸಗಳ ನವೀಕರಣ ಮತ್ತು ಆಧುನೀಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಘೋಷಿಸಿದ ಬೆನ್ನಿಗೇ ಸಚಿವರ ಈ ಹೇಳಿಕೆ ಹೊರಬಿದ್ದಿದೆ.

ADVERTISEMENT

‘ಇದು ಬಿಜೆಪಿಯ ಮುಸ್ಲಿಂ ವಿರೋಧಿ ಮನಸ್ಥಿತಿಯನ್ನು ಬಿಂಬಿಸುತ್ತದೆ. ಸಚಿವರು ಒಬ್ಬರೇ ಅಲ್ಲ, ಬಿಜೆಪಿಯ ಹಲವು ಶಾಸಕರು ಕೂಡ ಹೀಗೆ ಮಾತನಾಡುತ್ತಾರೆ. ಅವರು ಮುಸ್ಲಿಮರ ವಿರುದ್ಧ ಆಕ್ಷೇಪಾರ್ಹ ರೀತಿಯಲ್ಲಿಯೇ ಮಾತನಾಡುತ್ತಾರೆ’ ಎಂದು ಎಸ್‌ಪಿಯ ಮುಖಂಡರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.