ADVERTISEMENT

ಜಮ್ಮು–ಕಾಶ್ಮೀರ: ದಟ್ಟಕಾಡಗಳಲ್ಲಿ ಭೂಗತ ಬಂಕರ್‌ಗಳ ನಿರ್ಮಾಣ

ಭಯೋತ್ಪಾದಕ ಸಂಘಟನೆಗಳಿಂದ ಕಾರ್ಯತಂತ್ರ ಬದಲು

ಪಿಟಿಐ
Published 14 ಸೆಪ್ಟೆಂಬರ್ 2025, 14:16 IST
Last Updated 14 ಸೆಪ್ಟೆಂಬರ್ 2025, 14:16 IST
-
-   

ಶ್ರೀನಗರ: ಜಮ್ಮು–ಕಾಶ್ಮೀರದ ವಿವಿಧೆಡೆ ಸ್ಥಳೀಯರ ಮನೆಗಳಲ್ಲಿ ಆಶ್ರಯ ಪಡೆದು ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿದ್ದ ಉಗ್ರ ಸಂಘಟನೆಗಳು ಈಗ ತಮ್ಮ ಕಾರ್ಯತಂತ್ರ ಬದಲಿಸಿವೆ. ಎತ್ತರ ಪ್ರದೇಶಗಳು ಹಾಗೂ ದಟ್ಟ ಕಾಡುಗಳಲ್ಲಿ ನೆಲದಡಿ ಬಂಕರ್‌ಗಳನ್ನು ನಿರ್ಮಿಸಿ, ಉಗ್ರರು ತಮ್ಮ ಚಟುವಟಿಕೆ ಮುಂದುವರಿಸುತ್ತಿರುವುದು ಸೇನೆಗೆ ಹೊಸ ಸವಾಲಾಗಿದೆ.

ಕಳೆದ ವಾರ ಕುಲ್ಗಾಮ್‌ ಜಿಲ್ಲೆಯಲ್ಲಿ ಭೀಕರ ಗುಂಡಿನ ಚಕಮಕಿ ನಡೆದು, ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ವೇಳೆ, ಇದು ಗೊತ್ತಾಗಿದೆ.

ಸ್ಥಳೀಯರು ಆಶ್ರಯ ನೀಡಲು ನಿರಾಕರಿಸುತ್ತಿರುವುದೇ ಉಗ್ರರು ತಮ್ಮ ಕಾರ್ಯತಂತ್ರಗಳನ್ನು ಬದಲಿಸಲು ಮುಖ್ಯ ಕಾರಣ ಎಂದು ಸೇನೆ ಹಾಗೂ ಇತರ ಭದ್ರತಾ ಸಂಸ್ಥೆಗಳ ವಿಶ್ಲೇಷಣೆಯಾಗಿದೆ.

ADVERTISEMENT

ಕುಲ್ಗಾಮ್‌ ಜಿಲ್ಲೆಯಲ್ಲಿ ಉಗ್ರರ ಬೇಟೆಯನ್ನು ತೀವ್ರಗೊಳಿಸಿದ ಭದ್ರತಾ ಪಡೆಗಳಿಗೆ ಅಚ್ಚರಿ ಕಾದಿತ್ತು. ದಟ್ಟ ಕಾಡಿನಲ್ಲಿ ದೊಡ್ಡ ಕಂದಕಗಳು ಕಂಡುಬಂದಿದ್ದವು. ಅವುಗಳಲ್ಲಿ, ದಿನಸಿ ಪದಾರ್ಥಗಳು, ಗ್ಯಾಸ್‌ ಸ್ಟೌಗಳು, ಪ್ರೆಷರ್‌ ಕುಕ್ಕರ್‌ಗಳು ಹಾಗೂ ಶಸ್ತ್ರಾಸ್ತ್ರಗಳು ಕಂಡುಬಂದವು.

‘ಉಗ್ರರು ಕಾಡುಗಳಲ್ಲಿ ಇಂತಹ ನೆಲೆಗಳನ್ನು ಮಾಡುತ್ತಿರುವುದು ವ್ಯಾಪಕವಾಗುತ್ತಿದೆ. ಅದರಲ್ಲೂ, ಕುಲ್ಗಾಮ್‌, ಶೋಪಿಯಾನ್ ಜಿಲ್ಲೆಗಳು, ಜಮ್ಮು ಪ್ರದೇಶದ ಪೀರ್‌ ಪಂಜಾಲ್‌ನಲ್ಲಿರುವ ದಟ್ಟ ಕಾಡುಗಳು ಗುಪ್ತವಾಗಿ ತಮ್ಮ ಚಟುವಟಿಕೆಗಳನ್ನು ನಡೆಸಲು ಉಗ್ರರಿಗೆ ಅನುಕೂಲವಾದ ತಾಣಗಳೆಸಿವೆ’ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಹೇಳುತ್ತಾರೆ.

ಎತ್ತರದ ಪ್ರದೇಶಗಳಲ್ಲಿನ ಕಂದಕಗಳಲ್ಲಿ ಉಗ್ರರು 1990 ಹಾಗೂ 2000 ಇಸ್ಟಿ ನಡುವೆ ಅಡಗುತಾಣಗಳನ್ನು ನಿರ್ಮಿಸುವುದು ಸಾಮಾನ್ಯವಾಗಿತ್ತು. ಈಗ ಮತ್ತೆ ಅದೇ ತಂತ್ರಕ್ಕೆ ಮೊರೆ ಹೋಗುತ್ತಿದ್ದಾರೆ. ಈ ಹೊಸ ಸವಾಲು ಎದುರಿಸಲು ಸೇನೆ ಕೂಡ ತನ್ನ ಕಾರ್ಯತಂತ್ರ ಬದಲಿಸುವುದು ಖಚಿತ
ಡಿ.ಎಸ್‌.ಹೂಡಾ ಲೆಫ್ಟಿನೆಂಟ್‌ ಜನರಲ್‌(ನಿವೃತ್ತ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.