ADVERTISEMENT

Terror Attack: ‘ಉಗ್ರರು ಇಸ್ಲಾಮಿಕ್‌ ಸಾಲುಗಳನ್ನು ಪಠಿಸಲು ಹೇಳಿದರು...’

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 22:30 IST
Last Updated 22 ಏಪ್ರಿಲ್ 2025, 22:30 IST
<div class="paragraphs"><p>ಸಂಗ್ರಹ ಚಿತ್ರ</p></div>

ಸಂಗ್ರಹ ಚಿತ್ರ

   

(ಪಿಟಿಐ ಚಿತ್ರ)

ಮುಂಬೈ: ಭಯೋತ್ಪಾದಕರು ಬಂದಾಗ ಕುಟುಂಬವು ಭಯದಿಂದ ಡೇರೆಯೊಂದರ ಒಳಗೆ ಅಡಗಿತ್ತು. 54 ವರ್ಷ ವಯಸ್ಸಿನ ಸಂತೋಷ್ ಜಗದಾಳೆ ಎನ್ನುವವರಿಗೆ ಹೊರಬರಲು ಹೇಳಿದ ಉಗ್ರರು, ಇಸ್ಲಾಮಿಕ್‌ ಸಾಲುಗಳನ್ನು ಹೇಳಲು ಸೂಚಿಸಿದರು.

ADVERTISEMENT

ಅವರಿಗೆ ಅದನ್ನು ಹೇಳಲು ಬರದೆ ಇದ್ದಾಗ, ಸಂತೋಷ್ ಅವರ ಮೇಲೆ ಮೂರು ಬಾರಿ ಗುಂಡು ಹಾರಿಸಿದರು. ಒಮ್ಮೆ ತಲೆಗೆ, ಕಿವಿಯ ಹಿಂದೆ ಒಮ್ಮೆ ಹಾಗೂ ಬೆನ್ನಿಗೆ ಒಮ್ಮೆ ಗುಂಡು ಹಾರಿಸಲಾಯಿತು.

ಸಂತೋಷ್ ಅವರ 26 ವರ್ಷ ವಯಸ್ಸಿನ ಮಗಳು ಅಸವಾರಿ ಅವರು ತಮ್ಮ ಕುಟುಂಬ ಎದುರಿಸಿದ ಭಯಾನಕ ಪರಿಸ್ಥಿತಿಯ ವಿವರಗಳನ್ನು ಸುದ್ದಿಸಂಸ್ಥೆಯ ಜೊತೆ ಹಂಚಿಕೊಂಡಿದ್ದಾರೆ.

ಸಂತೋಷ್ ಅವರು ನೆಲದ ಮೇಲೆ ಬಿದ್ದ ನಂತರ ಉಗ್ರರು ಅವರ ಪಕ್ಕದಲ್ಲೇ ಇದ್ದ ಇನ್ನೊಬ್ಬರ (ಯುವತಿಯ ಸಂಬಂಧಿ) ಮೇಲೆ ಹಲವು ಸುತ್ತು ಗುಂಡು ಹಾರಿಸಿದರು. ‘ನಾವು ಐವರು ಅಲ್ಲಿಗೆ ಹೋಗಿದ್ದೆವು. ಗುಂಡಿನ ದಾಳಿ ನಡೆದಾಗ ಬೈಸರನ್ ಕಣಿವೆಯಲ್ಲಿ ಇದ್ದೆವು’ ಎಂದು ಅವರು ಹೇಳಿದ್ದಾರೆ.

ತಮ್ಮ ತಂದೆ ಮತ್ತು ಸಂಬಂಧಿ ಮೃತಪಟ್ಟಿದ್ದಾರೆಯೇ ಅಥವಾ ಬದುಕಿದ್ದಾರೆಯೇ ಎಂಬುದು ಅಸವಾರಿ ಅವರಿಗೆ ತಿಳಿದಿಲ್ಲ. ಅಸವಾರಿ, ಅವರ ತಾಯಿ ಮತ್ತು ಇನ್ನೊಬ್ಬರು ಮಹಿಳೆಯನ್ನು ಉಗ್ರರು ಬಿಟ್ಟು ಕಳುಹಿಸಿದರು. ಸ್ಥಳೀಯರು ಮತ್ತು ಭದ್ರತಾ ಸಿಬ್ಬಂದಿ ಈ ಮೂವರನ್ನು ಪಹಲ್ಗಾಮ್‌ ಕ್ಲಬ್‌ಗೆ ಕರೆತಂದರು.

ಅಸವಾರಿ ಅವರು ಪುಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬವು ಬೈಸರನ್‌ಗೆ ಪ್ರವಾಸಕ್ಕೆ ತೆರಳಿತ್ತು. ಗುಂಡಿನ ದಾಳಿ ನಡೆಸಿದ ಉಗ್ರರು ಸ್ಥಳೀಯ ಪೊಲೀಸರ ಸಮವಸ್ತ್ರವನ್ನು ಹೋಲುವ ಬಟ್ಟೆ ಧರಿಸಿದ್ದರು.

‘ನಾವು ರಕ್ಷಣೆಗಾಗಿ ಹತ್ತಿರದಲ್ಲಿದ್ದ ಡೇರೆಯೊಂದಕ್ಕೆ ತಕ್ಷಣವೇ ತೆರಳಿದೆವು. ನಮ್ಮ ಜೊತೆ ಆರೇಳು ಮಂದಿ ಇತರ ಪ್ರಯಾಣಿಕರೂ ಇದ್ದರು. ನಾವು ರಕ್ಷಣೆಗಾಗಿ ನೆಲದ ಮೇಲೆ ಉರುಳಿಕೊಂಡೆವು. ಗುಂಡಿನ ಚಕಮಕಿಯು ಭದ್ರತಾ ಸಿಬ್ಬಂದಿ ಮತ್ತು ಭಯೋತ್ಪಾದಕರ ನಡುವೆ ನಡೆಯುತ್ತಿದೆ ಎಂದು ನಾವು ಭಾವಿಸಿದ್ದೆವು’ ಎಂದು ಅಸವಾರಿ ಹೇಳಿದರು.

‘ಭಯೋತ್ಪಾದಕರ ಗುಂಪು ಹತ್ತಿರದ ಡೇರೆಯೊಂದರ ಬಳಿ ಬಂದು ಗುಂಡಿನ ದಾಳಿ ನಡೆಸಿತು. ನಂತರ ಅವರು ನಾವಿದ್ದ ಡೇರೆಯ ಬಳಿ ಬಂದು ನನ್ನ ಅಪ್ಪನಿಗೆ ಹೊರಗೆ ಬರಲು ಹೇಳಿದರು. ನಂತರ ಆ ಉಗ್ರರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾವು ಬೆಂಬಲ ನೀಡುತ್ತಿದ್ದೇವೆ ಎಂದು ನಮ್ಮನ್ನು ನಿಂದಿಸಿದರು. ಅದಾದ ನಂತರದಲ್ಲಿ, ಕಾಶ್ಮೀರಿ ಉಗ್ರರು ಮುಗ್ಧರನ್ನು, ಮಕ್ಕಳನ್ನು, ಮಹಿಳೆಯರನ್ನು ಕೊಲ್ಲುತ್ತಾರೆ ಎಂಬುದನ್ನು ನಿರಾಕರಿಸುವ ಕೆಲವು ಮಾತುಗಳನ್ನು ಆಡಿದರು’ ಎಂದು ಅಸವಾರಿ ವಿವರಿಸಿದರು.

ಗುಂಡಿನ ದಾಳಿ ನಡೆದಾಗ ಸಹಾಯಕ್ಕೆ ಯಾರೂ ಇರಲಿಲ್ಲ. ಪೊಲೀಸರು ಅಥವಾ ಸೇನಾ ಸಿಬ್ಬಂದಿ ಅಲ್ಲಿ ಇರಲಿಲ್ಲ. ಅವರೆಲ್ಲ 20 ನಿಮಿಷ ನಂತರ ಬಂದರು. ಅಲ್ಲಿದ್ದ ಸ್ಥಳೀಯರು ಕೂಡ ಇಸ್ಲಾಮಿಕ್‌ ಸಾಲುಗಳನ್ನು ಪಠಿಸುತ್ತಿದ್ದರು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.