ADVERTISEMENT

ಉಗ್ರರ ಹೊಸ ವರಸೆ: ಶೌಚ ಗುಂಡಿ, ನಾಲೆಗಳ ಕೆಳಗೆ ಬಂಕರ್‌ ನಿರ್ಮಾಣ

ಭದ್ರತಾ ಪಡೆಗಳ ಕಣ್ತಪ್ಪಿಸಲು ಈ ದಾರಿ

ಪಿಟಿಐ
Published 27 ಸೆಪ್ಟೆಂಬರ್ 2020, 7:51 IST
Last Updated 27 ಸೆಪ್ಟೆಂಬರ್ 2020, 7:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ:ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಕಣ್ಣಿಗೆ ಬೀಳಬಾರದು ಎಂಬ ಉದ್ದೇಶದಿಂದ ಉಗ್ರರು ಹೊಸ ತಂತ್ರಗಳ ಮೊರೆ ಹೋಗುತ್ತಿದ್ದಾರೆ. ಕೆಲವೆಡೆ ಶೌಚಾಲಯಗಳ ಕೆಳಗೆ ಇನ್ನೂ ಕೆಲವೆಡೆ ನಾಲೆಗಳ ಕೆಳಗೆ ಬಂಕರ್‌ ನಿರ್ಮಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಉಗ್ರರ ನಿಗ್ರಹಕ್ಕಾಗಿ ವ್ಯಾಪ‍ಕ ಶೋಧ ಕಾರ್ಯ ಆರಂಭಿಸಲಾಗಿದೆ. ಇತ್ತೀಚೆಗೆ ಕೈಗೊಂಡಿದ್ದ ಎನ್‌ಕೌಂಟರ್‌ಗಳಲ್ಲಿ ಹಲವಾರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಈ ಬೆಳವಣಿಗೆಯಿಂದ ಉಗ್ರರು ಈ ರೀತಿಯ ಬೇರೆ ಅಡಗುತಾಣಗಳ ಮೊರೆ ಹೋಗುವ ಒತ್ತಡಕ್ಕೆ ಒಳಗಾಗಿದ್ದಾರೆ ಎಂದುಪೊಲೀಸ್‌ ಇಲಾಖೆ ಹಾಗೂ ಭದ್ರತಾ ಪಡೆಗಳ ಅಧಿಕಾರಿಗಳು ಹೇಳುತ್ತಾರೆ.

‘ಆಗಾಗ ತಮ್ಮ ಅಡುಗುತಾಣಗಳನ್ನು ಉಗ್ರರು ಬದಲಿಸುವುದು ಹೊಸದೇನಲ್ಲ. ಇತ್ತೀಚೆಗೆ ಶೌಚ ಗುಂಡಿಯೊಂದರ ಕೆಳಗೆ ನಿರ್ಮಿಸಿದ್ದ ಬಂಕರ್‌ನಲ್ಲಿ ಉಗ್ರರು ಅಡಗಿದ್ದನ್ನು ದಕ್ಷಿಣ ಕಾಶ್ಮೀರದಲ್ಲಿ ಪತ್ತೆ ಹಚ್ಚಿದ್ದೆವು’ ಎಂದು ಜಮ್ಮು–ಕಾಶ್ಮೀರದ ಡಿಜಿ ದಿಲ್‌ಬಾಗ್‌ ಸಿಂಗ್‌ ಹೇಳಿದರು.

ADVERTISEMENT

‘ಇದು ಮಾರ್ಚ್‌ನಲ್ಲಿ ನಡೆದ ಘಟನೆ. ಅನಂತನಾಗ್‌ ಜಿಲ್ಲೆಯ ವಟ್ರಿಗಾಮ್‌ ಪ್ರದೇಶದ ಮನೆಯೊಂದರ ಶೌಚಾಲಯದ ಗೋಡೆಗೆ ಹೊಸದಾಗಿ ಸಿಮೆಂಟ್‌ ಮೆತ್ತಿರುವುದನ್ನು ಗುರುತಿಸಲಾಯಿತು. ಈ ಬಗ್ಗೆ ಗುಪ್ತಚರ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಅಲ್ಲಿಯೇ ಬಂಕರ್‌ ನಿರ್ಮಿಸಿ ಉಗ್ರರು ಅಡಗಿರುವುದು ಪತ್ತೆಯಾಯಿತು’ ಎಂದೂ ಅವರು ವಿವರಿಸಿದರು.

‘ಶೌಚಾಲಯದ ಟೈಲ್ಸ್‌ಗಳು ಒಡೆದ ಕಾರಣ, ಸಿಮೆಂಟ್‌ ಮೆತ್ತಿ ಅವುಗಳನ್ನು ಪುನಃ ಕೂಡಿಸಲಾಗಿತ್ತು. ಮಲ ವಿಸರ್ಜನೆ ನಂತರ ಸರಿಯಾಗಿ ಸ್ವಚ್ಛಗೊಳಿಸದೇ ಬಿಡಲಾಗಿತ್ತು. ಅಲ್ಲಿ ನಿರ್ಮಿಸಿದ್ದ ಬಂಕರ್‌ನಲ್ಲಿ ಉಗ್ರರು ಅಡಗಿರುವ ಬಗ್ಗೆ ಅನುಮಾನ ಬರಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿತ್ತು. ಆ ಶೌಚಾಲಯದ ಸುತ್ತ ಅಗೆಯಲು ಆರಂಭಿಸಿದಾಗ, ಕೆಳಗಿನಿಂದ ಬೆಂಕಿ ಕಾಣಿಸಿಕೊಂಡಿತು. ನಂತರ ನಡೆದ ಕಾರ್ಯಾಚರಣೆಯಲ್ಲಿ ಅಲ್ಲಿಯೇ ಅಡಗಿದ್ದ ಲಷ್ಕರ್‌ ಎ ತಯಬಾದ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಯಿತು’ ಎಂದೂ ದಿಲ್‌ಬಾಗ್‌ ಸಿಂಗ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.