ADVERTISEMENT

ಜುಲೈ 5ರಂದು ಒಂದೇ ವೇದಿಕೆಯಲ್ಲಿ ಉದ್ಧವ್‌, ರಾಜ್ ಠಾಕ್ರೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 14:27 IST
Last Updated 30 ಜೂನ್ 2025, 14:27 IST
<div class="paragraphs"><p>ಉದ್ಧವ್‌ ಠಾಕ್ರೆ ಹಾಗೂ ರಾಜ್‌ ಠಾಕ್ರೆ</p></div>

ಉದ್ಧವ್‌ ಠಾಕ್ರೆ ಹಾಗೂ ರಾಜ್‌ ಠಾಕ್ರೆ

   

ಪಿಟಿಐ ಚಿತ್ರಗಳು

ಮುಂಬೈ: ಮಹಾರಾಷ್ಟ್ರದ ಶಾಲೆಗಳಲ್ಲಿ ಹಿಂದಿಯನ್ನು ಭಾಷೆಯಾಗಿ ಪ‍ರಿಚಯಿಸುವ ಆದೇಶ ಹಿಂಪಡೆದಿರುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದ ಬೆನ್ನಲ್ಲೇ, ಜುಲೈ 5ರಂದು ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿಯನ್ನು ‘ವಿಜಯ ರ‍್ಯಾಲಿ’ಯಾಗಿ ಹಮ್ಮಿಕೊಳ್ಳಲು ಶಿವಸೇನಾ, ಎಂಎನ್‌ಎಸ್‌ ನಿರ್ಧರಿಸಿವೆ.

ADVERTISEMENT

 

ಈ ಕುರಿತು ಮಾಧ್ಯಮಗಳ ಜೊತೆ ಪ್ರತ್ಯೇಕವಾಗಿ ಮಾತನಾಡಿದ ಶಿವಸೇನಾ (ಉದ್ಧವ್‌ ಬಣ) ಮುಖ್ಯಸ್ಥ ಉದ್ಧವ್‌ ಠಾಕ್ರೆ, ಎಂಎನ್‌ಎಸ್‌ ಅಧ್ಯಕ್ಷ ರಾಜ್‌ ಠಾಕ್ರೆ, ‘ಈ ಹಿಂದೆ ಜುಲೈ 5ರಂದು ನಿಗದಿಯಾಗಿದ್ದ ಪ್ರತಿಭಟನಾ ರ‍್ಯಾಲಿಯನ್ನು ‘ವಿಜಯ ರ‍್ಯಾಲಿ’ಯಾಗಿ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದರು.

 

ಈ ಕುರಿತು ಪ್ರತಿಕ್ರಿಯಿಸಿರುವ ವರ್ಲಿ ಕ್ಷೇತ್ರದ ಶಾಸಕ ಆದಿತ್ಯ ಠಾಕ್ರೆ, ‘ಮರಾಠಿ ಭಾಷಿಕರನ್ನು ಒಡೆಯಲು ಅವರು ಎಲ್ಲ ಪ್ರಯತ್ನಗಳನ್ನು ಮಾಡಿದರು. ಉದ್ಧವ್‌ ಹಾಗೂ ರಾಜ್‌ ಠಾಕ್ರೆ ಜೊತೆಯಾಗದಂತೆ ಎಲ್ಲ ಪ್ರಯತ್ನಗಳನ್ನು ನಡೆಸಿದ್ದರು’ ಎಂದು ಕಿಡಿಕಾರಿದರು.

 

‘ಹಿಂದಿ ಭಾಷೆ ಕಲಿಕೆ ಹಿಂಪಡೆಯುವುದು ಹಾಗೂ ತ್ರಿಭಾಷಾ ಸೂತ್ರ ಅಳವಡಿಕೆ ಕುರಿತು ಪರಿಶೀಲಿಸಲು ಶಿಕ್ಷಣ ತಜ್ಞ ನರೇಂದ್ರ ಜಾಧವ್‌ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತದೆ’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಸೋಮವಾರ ಪ್ರಕಟಿಸಿದ್ದರು.

 

ಸಮಿತಿ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಉದ್ಧವ್‌ ಠಾಕ್ರೆ,‘ಈ ವಿಚಾರವನ್ನು ಲಘುವಾಗಿ ಪರಿಗಣಿಸದಂತೆ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದೇನೆ. ಶಿಕ್ಷಣದ ವಿಚಾರವಾಗಿದ್ದರೂ ಆರ್ಥಿಕ ತಜ್ಞರನ್ನು ಸಮಿತಿಗೆ ನೇಮಕ ಮಾಡಿದ್ದೀರಿ. ಹಿಂದಿಯನ್ನು ಒತ್ತಾಯಪೂರ್ವಕವಾಗಿ ಜಾರಿಗೊಳಿಸಲು ಹೊರಟಿರುವ ಸರ್ಕಾರದ ನಿರ್ಧಾರವೇ ಅರ್ಥವಾಗುತ್ತಿಲ್ಲ’ ಎಂದು ಕಿಡಿಕಾರಿದ್ದಾರೆ.

 

‘100–200 ವರ್ಷದ ಇತಿಹಾಸ ಹೊಂದಿರುವ ಹಿಂದಿಯೇ ಮರಾಠಿಗಿಂತಲೂ ಶ್ರೇಷ್ಠ ಎಂದು ಬಿಂಬಿಸಲು ಹೊರಟಿದ್ದಾರೆ. ಮರಾಠಿಗೆ 3 ಸಾವಿರ ವರ್ಷಗಳ ಇತಿಹಾಸವಿದೆ. ಹಿಂದಿ ಹೇರಿಕೆ ಒಪ್ಪಲು ಸಾಧ್ಯವಿಲ್ಲ, ಇದಕ್ಕೆ ಅವಕಾಶ ನೀಡಲ್ಲ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.