ADVERTISEMENT

ಸದನದಲ್ಲಿ ಇ–ಸಿಗರೇಟ್ ಸೇದಿದ ಆರೋಪ; ಟಿಎಂಸಿ ಸಂಸದನ ವಿರುದ್ಧ ಅನುರಾಗ್‌ ದೂರು

ಕಠಿಣ ಕ್ರಮಕ್ಕೆ ಆಗ್ರಹ

ಪಿಟಿಐ
Published 12 ಡಿಸೆಂಬರ್ 2025, 14:16 IST
Last Updated 12 ಡಿಸೆಂಬರ್ 2025, 14:16 IST
.
.   

ನವದೆಹಲಿ: ಸದನದೊಳಗೆ ಇ–ಸಿಗರೇಟ್‌ ಸೇದಿದ ಆರೋಪದಡಿ ಟಿಎಂಸಿ ಸಂಸದರೊಬ್ಬರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಅವರು ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಶುಕ್ರವಾರ ಲಿಖಿತ ದೂರು ನೀಡಿದ್ದಾರೆ.

ಗುರುವಾರ ಲೋಕಸಭೆಯಲ್ಲಿ ಠಾಕೂರ್ ಅವರು ಟಿಎಂಸಿ ಸಂಸದರ ಹೆಸರನ್ನು ಉಲ್ಲೇಖಿಸದೆ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಈ ಬಗ್ಗೆ ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಬಿರ್ಲಾ ಭರವಸೆ ನೀಡಿದ್ದರು.

‘ಟಿಎಂಸಿ ಸಂಸದ ಅಧಿವೇಶನದ ಸಮಯದಲ್ಲಿ ಬಹಿರಂಗವಾಗಿ ಇ–ಸಿಗರೇಟ್‌ ಬಳಸಿದ್ದಾರೆ. ಅಲ್ಲಿ ಹಾಜರಿದ್ದ ಅನೇಕ ಸಂಸದರಿಗೆ ಈ ದೃಶ್ಯ ಸ್ಪಷ್ಟವಾಗಿ ಗೋಚರಿಸಿದೆ’ ಎಂದು ಹಮೀರ್‌ಪುರ ಕ್ಷೇತ್ರದ ಸಂಸದರು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಲೋಕಸಭೆಯ ಸಭಾಂಗಣದೊಳಗೆ ನಿಷೇಧಿತ ವಸ್ತು ಮತ್ತು ಉಪಕರಣಗಳನ್ನು ಬಹಿರಂಗವಾಗಿ ಬಳಸುವುದು ಸಂಸತ್ತಿನ ಸಭ್ಯತೆ ಮತ್ತು ಶಿಸ್ತಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಅಲ್ಲದೆ, ಸದನ ಜಾರಿಗೆ ತಂದಿರುವ ಕಾನೂನುಗಳಡಿ ಇದು ಶಿಕ್ಷಾರ್ಹ ಅಪರಾಧವಾಗಿದೆ’ ಎಂದು ಹೇಳಿದ್ದಾರೆ.

ಭಾರತದಲ್ಲಿ ಕೆಲವು ವರ್ಷಗಳ ಹಿಂದೆ ಇ–ಸಿಗರೇಟ್‌ಗಳನ್ನು ನಿಷೇಧಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.