
ಪತ್ತನಂತಿಟ್ಟ (ಕೇರಳ): ಶಬರಿಮಲೆಯಲ್ಲಿ ನಡೆಯಲಿರುವ ಮಂಡಲಪೂಜೆಯಲ್ಲಿ ಅಯ್ಯಪ್ಪ ಸ್ವಾಮಿಗೆ ಅಲಂಕರಿಸುವ ಸ್ವರ್ಣವಸ್ತ್ರದ ಮೆರವಣಿಗೆಯು ಇಲ್ಲಿನ ಅರನ್ಮುಳದ ಶ್ರೀ ಪಾರ್ಥಸಾರಥಿ ದೇಗುಲದಿಂದ ಮಂಗಳವಾರ ಆರಂಭವಾಗಿದೆ.
ಅಲಂಕೃತ ರಥದಲ್ಲಿ ಸ್ವರ್ಣವಸ್ತ್ರದ ಮೆರವಣಿಗೆ ಹೊರಟಿದ್ದು, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧಿಕಾರಿಗಳು ಹಾಗೂ ಅಪಾರ ಪ್ರಮಾಣದ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಶಬರಿಮಲೆ ತಲುಪುವ ಸಾಂಪ್ರದಾಯಿಕ ಮಾರ್ಗಗಳ ಮೂಲಕ ಮೆರವಣಿಗೆ ಹಾದು ಹೋಗಲಿದ್ದು, ಮಾರ್ಗದಲ್ಲಿನ ವಿವಿಧ ದೇವಾಲಯಗಳಲ್ಲಿ ಸ್ವರ್ಣವಸ್ತ್ರಕ್ಕೆ ಸ್ವಾಗತ ಸಿಗಲಿದೆ.
ದೀಪಾರಾಧನೆ ಸಮಾರಂಭ ನಡೆಯುವ ಮುನ್ನ ಅಂದರೆ ಡಿ.26ರ ವೇಳೆಗೆ ಸ್ವರ್ಣವಸ್ತ್ರವು ಶಬರಿಮಲೆ ತಲುಪಲಿದೆ. ಡಿ.27ರ ಮಧ್ಯಾಹ್ನ ಅಯ್ಯಪ್ಪನಿಗೆ ಸ್ವರ್ಣವಸ್ತ್ರ ತೊಡಿಸಿ, ಮಂಡಲ ಪೂಜೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
453 ಸವರನ್ (3.7 ಕೆ.ಜಿ.) ತೂಕದ ಸ್ವರ್ಣವಸ್ತ್ರವನ್ನು ತಿರುವಂಕೂರು ರಾಜಮನೆತನವು 1970ರಲ್ಲಿ ಅಯ್ಯಪ್ಪ ಸ್ವಾಮಿಗೆ ಉಡುಗೊರೆಯಾಗಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.