ADVERTISEMENT

100 ಕೋಟಿ ಡೋಸ್‌ ಲಸಿಕೆ: ಕೇಂದ್ರವನ್ನು ಹೊಗಳಿದ ತರೂರ್‌ಗೆ ಸ್ವಪಕ್ಷೀಯರ ಮೂದಲಿಕೆ  

ಪಿಟಿಐ
Published 21 ಅಕ್ಟೋಬರ್ 2021, 11:02 IST
Last Updated 21 ಅಕ್ಟೋಬರ್ 2021, 11:02 IST
ಶಶಿ ತರೂರ್‌
ಶಶಿ ತರೂರ್‌   

ನವದೆಹಲಿ: ಭಾರತ ನೂರು ಕೋಟಿ ಕೋವಿಡ್‌ ಲಸಿಕೆ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅವರು ಕೇಂದ್ರ ಸರ್ಕಾರವನ್ನು ಹೊಗಳಿದಿದ್ದಾರೆ. ಕೇಂದ್ರವನ್ನು ಪ್ರಶಂಸೆ ಮಾಡಿದ್ದಕಾಗಿ ತರೂರ್‌ ಸ್ವಪಕ್ಷೀಯರಿಂದ ಮೂದಲಿಕೆ ಅನುಭವಿಸಿದ್ದಾರೆ.

ದೇಶ 100 ಕೋಟಿ ಕೋವಿಡ್ ಲಸಿಕೆ ಸಾಧಿಸಿದ್ದರ ಶ್ರೇಯ ಕೇಂದ್ರ ಸರ್ಕಾರಕ್ಕೆ ಸಲ್ಲಬೇಕು ಎಂದು ತರೂರ್‌ ಹೇಳಿದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವಸ್ವಪಕ್ಷೀಯರೇ ಆದ ಪವನ್ ಖೇರಾ, ‘ ಕೇಂದ್ರಕ್ಕೆ ಶ್ರೇಯ ನೀಡುವುದು, ಕೋವಿಡ್‌ನ ಕೆಟ್ಟ ನಿರ್ವಹಣೆಯ ದುಷ್ಪರಿಣಾಮ ಅನುಭವಿಸಿದ ಕುಟುಂಬಗಳಿಗೆ ಮಾಡಿದ ಅಪಮಾನ,‘ ಎಂದು ಹೇಳಿದ್ದಾರೆ.

ಕೋವಿಡ್ -19 ವಿರುದ್ಧದ ಲಸಿಕಾ ಆಭಿಯಾನದಲ್ಲಿ ಭಾರತವು ಗುರುವಾರ ಪ್ರಮುಖ ಮೈಲಿಗಲ್ಲು ಸಾಧಿಸಿದೆ. ಗುರುವಾರದ ವರೆಗೆ ದೇಶದಲ್ಲಿ 100 ಕೋಟಿ ಕೋವಿಡ್‌ ಲಸಿಕೆಗಳನ್ನು ನಾಗರಿಕರಿಗೆ ನೀಡಲಾಗಿದೆ.

ADVERTISEMENT

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ತರೂರ್, ‘ಇದು ಎಲ್ಲಾ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ಸರ್ಕಾರಕ್ಕೆ ಇದರ ಶ್ರೇಯವನ್ನು ಸಲ್ಲಿಸೋಣ. ಕೋವಿಡ್ ಎರಡನೇ ಅಲೆಯ ಕೆಟ್ಟ ನಿರ್ವಹಣೆ ನಂತರ ಸರ್ಕಾರ ಎಚ್ಚೆತ್ತುಕೊಂಡಿದೆ. ತನ್ನ ಹಿಂದಿನ ವೈಫಲ್ಯಗಳಿಗೆ ಜಾವಾಬುದಾರನಾಗಿ ಸರ್ಕಾರ ಉಳಿದುಕೊಂಡಿದೆ,‘ ಎಂದು ಟ್ವೀಟ್ ಮಾಡಿದ್ದಾರೆ.

ತರೂರ್ ಅವರ ಟ್ವೀಟ್‌ಗೆ ತಿರುಗೇಟು ನೀಡಿರುವ ಕಾಂಗ್ರೆಸ್‌ ವಕ್ತಾರ ಖೇರಾ, ‘ಸರ್ಕಾರಕ್ಕೆ ಕ್ರೆಡಿಟ್ ನೀಡಿದರೆ, ಅದು ಕೋವಿಡ್‌ನ ಕೆಟ್ಟ ನಿರ್ವಹಣೆಯ ದುಷ್ಪರಿಣಾಮವನ್ನು ಅನುಭವಿಸಿದ, ಈಗಲೂ ಅನುಭವಿಸುತ್ತಿರುವ ಲಕ್ಷಾಂತರ ಕುಟುಂಬಗಳಿಗೆ ಮಾಡಿದ ಅವಮಾನ’ ಎಂದು ಹೇಳಿದ್ದಾರೆ.

‘ಸಾಧನೆಯ ಶ್ರೇಯ ಪಡೆಯುವ ಮೊದಲು, ಕೋವಿಡ್‌ ಪಿಡುಗಿನ ಕೆಟ್ಟ ನಿರ್ವಹಣೆಯ ಪರಿಣಾಮ ಅನುಭವಿಸಿದ ಕುಟುಂಬಗಳ ಕ್ಷಮೆಯನ್ನು ಪ್ರಧಾನಿ ಕೇಳಬೇಕು. ಶ್ರೇಯವನ್ನು ವಿಜ್ಞಾನಿಗಳು ಮತ್ತು ವೈದ್ಯಕೀಯ ವರ್ಗಕ್ಕೆ ನೀಡಬೇಕು,‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.