ADVERTISEMENT

ಶಶಿ ತರೂರ್‌ ರಚಿಸಿರುವ ಅಂಬೇಡ್ಕರ್‌ ಜೀವನ ಚರಿತ್ರೆ ಮುಂದಿನ ತಿಂಗಳು ಬಿಡುಗಡೆ

ಪಿಟಿಐ
Published 1 ಸೆಪ್ಟೆಂಬರ್ 2022, 15:55 IST
Last Updated 1 ಸೆಪ್ಟೆಂಬರ್ 2022, 15:55 IST
ಶಶಿ ತರೂರ್
ಶಶಿ ತರೂರ್   

ನವದೆಹಲಿ: ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಜೀವನಚರಿತ್ರೆ ರಚಿಸಿದ್ದಾರೆ. ‘ಅಂಬೇಡ್ಕರ್‌: ಎ ಲೈಫ್‌’ ಎಂಬ ಈ ಪುಸ್ತಕವು ಅಕ್ಟೋಬರ್‌ 1ರಂದು ಬಿಡುಗಡೆ ಆಗಲಿದೆ ಎಂದು ಈ ಪುಸ್ತಕದ ಪ್ರಕಾಶಕರಾಗಿರುವ ಆಲೆಪ್‌ ಬುಕ್‌ ಕಂಪನಿ ತಿಳಿಸಿದೆ.

ಈ ಪುಸ್ತಕದಲ್ಲಿ ತರೂರ್‌ ಅವರು ಅಂಬೇಡ್ಕರ್‌ ಅವರ ಜೀವನದ ಒಳನೋಟಗಳನ್ನು ತೆರೆದಟ್ಟಿದ್ದಾರೆ. ಅಲ್ಲದೇ, ಜವಾಹರ್‌ಲಾಲ್‌ ನೆಹರೂ, ಮಹಾತ್ಮ ಗಾಂಧಿ ಸೇರಿ ತಮ್ಮ ಸಮಕಾಲೀನ ನಾಯಕರ ಜೊತೆ ಅಂಬೇಡ್ಕರ್‌ ಅವರು ಹೊಂದಿದ್ದ ಬಿನ್ನಾಭಿಪ್ರಾಗಳ ಕುರಿತೂ ಈ ಪುಸ್ತಕದಲ್ಲಿ ಮಾ‌ಹಿತಿ ನೀಡಲಾಗಿದೆ.

ಅಂದಿನ ಬಾಂಬೆ ಪ್ರಾಂತ್ಯದಲ್ಲಿ ಮಹಾರ್‌ ಸಮುದಾಯದಲ್ಲಿ ಅಂಬೇಡ್ಕರ್‌ ಅವರು 1891ರ ಏಪ್ರಿಲ್‌ 14ರಂದು ಜನಿಸಿದ್ದಾಗಿನಿಂದ 1956ರ ಡಿಸೆಂಬರ್‌ 6ರಂದು ಅವರು ದೆಹಲಿಯಲ್ಲಿ ನಿಧನರಾದವರೆಗೂ ಅವರ ಜೀವನದ ಪ್ರಮುಖ ಘಟ್ಟಗಳನ್ನು ತರೂರ್‌ ಅವರು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ADVERTISEMENT

ಸಾಮಾಜಿಕ ನಿಂದನೆಗೆ ಗುರಿಯಾಗಿದ್ದ ಸಮುದಾಯದಲ್ಲಿ ಜನಿಸಿದ್ದ ಅವರು ಅನುಭವಿಸಿದ ಹಲವಾರು ಅಪಮಾನಗಳು ಮತ್ತು ಅಡ್ಡಿ ಆತಂಕಗಳು ಮತ್ತು ಅವೆಲ್ಲವನ್ನು ಮೀರಲು ಅವರಿಗಿದ್ದ ದೃಢನಿಶ್ಚಯ, ಅಸ್ಪೃಶ್ಯತೆಯನ್ನು ಕಾನೂನುಬಾಹಿರಗೊಳಿಸಿಲು ಅವರು ನಡೆಸಿದ ಹೋರಾಟ, ದೂರದೃಷ್ಟಿಯುಳ್ಳ ಸಂವಿಧಾನವನ್ನು ದೇಶಕ್ಕೆ ನೀಡುವುದರಲ್ಲಿ ಅವರಿಗಿದ್ದ ಬದ್ಧತೆ ಕುರಿತು ಈ ಪುಸ್ತಕ ಬೆಳಕು ಚೆಲ್ಲುತ್ತದೆ ಎಂದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

‘ಇನ್ನೂ ಜನಿಸದೇ ಇರುವ ಲಕ್ಷಾಂತರ ಜನರ ಜೀವನವನ್ನುಹಲವಾರು ಹೋರಾಟಗಳ ಮೂಲಕ ಅಂಬೇಡ್ಕರ್‌ ಅವರು ಬದಲಾಯಿಸಿದರು. ತಮ್ಮ ಬೌದ್ಧಿಕ ಶಕ್ತಿ ಮತ್ತು ಲೇಖನಿಯಿಂದ ಪ್ರಚೀನ ನಾಗರಿಕತೆ ಆಗಿದ್ದ ಭಾರತವನ್ನು ಆಧುನಿಕ ಯುಗಕ್ಕೆ ಕರೆದುಕೊಂಡು ಬಂದರು’ ಎಂದು ತರೂರ್‌ ಅಂಬೇಡ್ಕರ್‌ ಕುರಿತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.