ADVERTISEMENT

ಬಿಪಿನ್ ರಾವತ್ ಕೊನೆಯ ಸಂದೇಶ ಬಿಡುಗಡೆ ಮಾಡಿದ ಸೇನೆ: ವಿಡಿಯೊ ನೋಡಿ

ಪಿಟಿಐ
Published 12 ಡಿಸೆಂಬರ್ 2021, 12:54 IST
Last Updated 12 ಡಿಸೆಂಬರ್ 2021, 12:54 IST
ದಿ. ಸಿಡಿಎಸ್ ಬಿಪಿನ್ ರಾವತ್ (ಪಿಟಿಐ ಚಿತ್ರ)
ದಿ. ಸಿಡಿಎಸ್ ಬಿಪಿನ್ ರಾವತ್ (ಪಿಟಿಐ ಚಿತ್ರ)   

ನವದೆಹಲಿ: ತಮಿಳುನಾಡಿನ ಕೂನೂರಿನಲ್ಲಿ ಡಿ. 8ರಂದು ಮಧ್ಯಾಹ್ನ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಅವರ ಕೊನೆಯ ಸಾರ್ವಜನಿಕ ಸಂದೇಶವನ್ನು ಭಾರತೀಯ ಸೇನೆ ಭಾನುವಾರ ಬಿಡುಗಡೆ ಮಾಡಿದೆ.

1971ರ ಯುದ್ಧದ 50ನೇ ವರ್ಷಾಚರಣೆ ಅಂಗವಾಗಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿ ಸಶಸ್ತ್ರ ಪಡೆಗಳನ್ನು ಉದ್ದೇಶಿಸಿ ರಾವತ್ ಮಾತನಾಡಿದ್ದರು. ಇದರ 1.10 ನಿಮಿಷಗಳ ವಿಡಿಯೊ ಸಂದೇಶವನ್ನು ಸೇನೆ ಬಿಡುಗಡೆ ಮಾಡಿದೆ. ಡಿಸೆಂಬರ್ 7ರ ಸಂಜೆ ಈ ವಿಡಿಯೊ ಚಿತ್ರೀಕರಿಸಲಾಗಿತ್ತು ಎಂದು ಸೇನೆ ತಿಳಿಸಿದೆ.

ಏನು ಹೇಳಿದ್ದರು ರಾವತ್?: ‘ನಮ್ಮ ಸೇನೆಯ ಬಗ್ಗೆ ನಮಗೆ ಹೆಮ್ಮೆಯಿದೆ. ವಿಜಯ ಪರ್ವವನ್ನು ಜತೆಗೂಡಿ ಸಂಭ್ರಮಿಸೋಣ’ ಎಂದು ಕೊನೆಯ ಸಂದೇಶದಲ್ಲಿ ರಾವತ್ ಹೇಳಿದ್ದರು.

‘ಭಾರತೀಯ ಸೇನೆಯ ಎಲ್ಲ ಯೋಧರಿಗೂ 1971ರ ಯುದ್ಧದ ಗೆಲುವಿನ ಶುಭಾಶಯಗಳು. ಆ ವಿಜಯದ 50ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಹುತಾತ್ಮ ಯೋಧರನ್ನು ನಾನು ನೆನಪಿಸಿಕೊಳ್ಳುತ್ತಿದ್ದೇನೆ. ಅವರೆಲ್ಲರಿಗೂ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ. ಈ ಗೆಲುವಿನ ವರ್ಷಾಚರಣೆ ಅಂಗವಾಗಿ ಡಿ.12ರಿಂದ 16ರ ವರೆಗೆ ಇಂಡಿಯಾ ಗೇಟ್‌ನಲ್ಲಿ ವಿಭಿನ್ನ ಕಾರ್ಯಕ್ರಮಗಳು ನಡೆಯಲಿವೆ. ಇದು ಸೌಭಾಗ್ಯದ ವಿಚಾರ. ನಮ್ಮ ವೀರ ಯೋಧರ ಬಲಿದಾನದ ನೆನಪಿಗಾಗಿ ಸ್ಥಾಪಿಸಲಾಗಿರುವ ಅಮರ್ ಜವಾನ್ ಜ್ಯೋತಿ ಬಳಿ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ದೇಶದ ಎಲ್ಲ ಜನರಿಗೂ ಆಹ್ವಾನ ನೀಡುತ್ತಿದ್ದೇನೆ. ನಮ್ಮ ಸೇನೆಯ ಬಗ್ಗೆ ನಮಗೆ ಹೆಮ್ಮೆಯಿದೆ. ಬನ್ನಿ, ವಿಜಯ ಪರ್ವವನ್ನು ಜತೆಗೂಡಿ ಸಂಭ್ರಮಿಸೋಣ’ ಎಂದು ರಾವತ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.