ADVERTISEMENT

ಲೋಕಸಭೆಯಲ್ಲಿ ವಕ್ಫ್ JPC ವರದಿ ಮಂಡನೆ: ವಿರೋಧ ಪಕ್ಷಗಳ ‍‍ಪ್ರತಿಭಟನೆ, ಸಭಾತ್ಯಾಗ

ಪಿಟಿಐ
Published 13 ಫೆಬ್ರುವರಿ 2025, 10:06 IST
Last Updated 13 ಫೆಬ್ರುವರಿ 2025, 10:06 IST
<div class="paragraphs"><p>ವಕ್ಫ್</p></div>

ವಕ್ಫ್

   

ನವದೆಹಲಿ: ವಕ್ಫ್‌ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದ ಸಂಸತ್ತಿನ ಜಂಟಿ ಸಮಿತಿಯ ವರದಿಯನ್ನು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಗದ್ದಲದ ನಡುವೆ ಗುರುವಾರ ಮಂಡಿಸಲಾಯಿತು.

ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಜೋರಾದ ಕಾರಣಕ್ಕೆ ಕಲಾಪವನ್ನು ಅಲ್ಪ ಅವಧಿಗೆ ಮುಂದೂಡಬೇಕಾಯಿತು.

ADVERTISEMENT

ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ವಿರೋಧ ಪಕ್ಷಗಳ ಇತರ ಕೆಲವು ಸದಸ್ಯರು, ಭಿನ್ನ ಅನಿಸಿಕೆಗಳನ್ನು ವರದಿಯಿಂದ ಅಳಿಸಲಾಗಿದೆ ಎಂದು ದೂರಿದರು. ಆದರೆ ಈ ಆರೋಪವನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅಲ್ಲಗಳೆದರು.

ಸಮಿತಿಯ ಸದಸ್ಯೆ, ಬಿಜೆಪಿಯ ಮೇಧಾ ವಿ. ಕುಲಕರ್ಣಿ ಅವರು ವಕ್ಫ್‌ (ತಿದ್ದುಪಡಿ) ಮಸೂದೆ ಕುರಿತ ವರದಿಯನ್ನು ಮಂಡಿಸಿದರು. ವರದಿಯ ಮಂಡನೆ ಆಗುತ್ತಿದ್ದಂತೆಯೇ ವಿರೋಧ ಪಕ್ಷಗಳ ಸದಸ್ಯರು ಗದ್ದಲ ಆರಂಭಿಸಿದರು.

ರಾಷ್ಟ್ರ‍ಪತಿ ದ್ರೌಪದಿ ಮುರ್ಮು ಅವರಿಂದ ಬಂದ ಸಂದೇಶವೊಂದನ್ನು ಸಭಾಪತಿ ಜಗದೀಪ್ ಧನಕರ್ ಅವರು ಓದಲು ಯತ್ನಿಸಿದಾಗಲೂ ಗದ್ದಲ ಮುಂದುವರಿದಿತ್ತು. ‘ರಾಷ್ಟ್ರಪತಿಯವರಿಗೆ ಅಗೌರವ ತೋರಬೇಡಿ’ ಎಂದು ಹೇಳಿದ ಧನಕರ್, ವಿರೋಧ ಪಕ್ಷಗಳ ಸದಸ್ಯರು ತಮ್ಮ ಆಸನದಲ್ಲಿ ಕುಳಿಕೊಳ್ಳಲು ಸೂಚಿಸುವಂತೆ ಖರ್ಗೆ ಅವರಿಗೆ ಹೇಳಿದರು. ಗದ್ದಲ ಮುಂದುವರಿದ ಪರಿಣಾಮವಾಗಿ ಸದನವನ್ನು ತುಸು ಹೊತ್ತು ಮುಂದೂಡಲಾಯಿತು.

ಕಲಾಪ ಮತ್ತೆ ಆರಂಭವಾದಾಗಲೂ ವಿರೋಧ ಪಕ್ಷಗಳ ಪ್ರತಿಭಟನೆ ಮುಂದುವರಿಯಿತು. ಕೆಲವು ಸದಸ್ಯರು ಸಭಾಪತಿ ಎದುರಿನ ಅಂಗಳಕ್ಕೆ ಇಳಿದರು. ಸಮೀರುಲ್ ಇಸ್ಲಾಂ, ನದೀಮುಲ್ ಹಕ್ ಮತ್ತು ಎಂ. ಮೊಹಮದ್ ಅಬ್ದುಲ್ಲಾ ಅವರು ಸದನದಲ್ಲಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಧನಕರ್ ಹೇಳಿದರು.

ಭಿನ್ನ ಅಭಿಪ್ರಾಯಗಳನ್ನು ವರದಿಯಿಂದ ತೆಗೆಯಲಾಗಿದೆ ಎಂದು ಡಿಎಂಕೆ ಸದಸ್ಯ ತಿರುಚಿ ಶಿವ ಮತ್ತು ಎಎಪಿ ಸದಸ್ಯ ಸಂಜಯ್ ಸಿಂಗ್ ಅವರೂ ಆಕ್ಷೇಪ ವ್ಯಕ್ತಪಡಿಸಿದರು.

ವರದಿಯಿಂದ ಯಾವ ಅಂಶವನ್ನೂ ಅಳಿಸಿಲ್ಲ ಎಂದು ರಿಜಿಜು ಉತ್ತರಿಸಿದರು. ಆದರೆ ತಾವು ದಾಖಲಿಸಿದ್ದ ಭಿನ್ನ ಅಭಿಪ್ರಾಯವನ್ನು ವರದಿಯಿಂದ ತೆಗೆಯಲಾಗಿದೆ ಎಂದು ಕಾಂಗ್ರೆಸ್ ಸದಸ್ಯ ಸೈಯದ್ ನಾಸಿರ್ ಹುಸೇನ್ ದೂರಿದರು.

ಇದು ನಕಲಿ ವರದಿ

ವಿರೋಧ ಪಕ್ಷಗಳ ಸದಸ್ಯರು ನೀಡಿದ್ದ ಭಿನ್ನ ಅಭಿಪ್ರಾಯಗಳಿಗೆ ವರದಿಯಲ್ಲಿ ಕತ್ತರಿ ಹಾಕಲಾಗಿದೆ. ಬಹುಮತ ಇರುವ ಪಕ್ಷದ ಸದಸ್ಯರ ಅಭಿಪ್ರಾಯವನ್ನು ಮಾತ್ರ ಇರಿಸಿಕೊಳ್ಳುವುದು ಸರಿಯಲ್ಲ. ಇದು ಖಂಡನಾರ್ಹ ಇದು ಪ್ರಜಾತಂತ್ರ ವಿರೋಧಿ. ಇದು ನಕಲಿ ವರದಿ. ಈ ವರದಿಯನ್ನು ಸಮಿತಿಗೆ ವಾಪಸ್ ಕಳುಹಿಸಬೇಕು. ಇಲ್ಲಿ ಸದಸ್ಯರು ವೈಯಕ್ತಿಕ ಕಾರಣಗಳಿಗೆ ಪ್ರತಿಭಟನೆ ನಡೆಸುತ್ತಿಲ್ಲ. ಒಂದು ಸಮುದಾಯಕ್ಕೆ ಅನ್ಯಾಯವಾಗಿದೆ. ಹೀಗಾಗಿ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ
– ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ

ಅಧ್ಯಕ್ಷರಿಗೆ ಅಧಿಕಾರವಿದೆ

ಸಮಿತಿಯ ಕುರಿತಾಗಿ ಆರೋಪಗಳನ್ನು ಹೊರಿಸುವಂತಹ ಕೆಲವು ಭಾಗಗಳನ್ನು ಮಾತ್ರ ತೆಗೆದುಹಾಕಲಾಗಿದೆ. ಸಮಿತಿಯ ಬಗ್ಗೆಯೇ ಆರೋಪ ಹೊರಿಸುವಂತಹ ಅಂಶಗಳು ಇದ್ದರೆ, ಅದು ಸರಿಯಲ್ಲ ಎಂದು ಅಧ್ಯಕ್ಷರಿಗೆ ಅನ್ನಿಸಿದರೆ, ಅಂತಹ ಅಂಶಗಳನ್ನು ತೆಗೆಯುವ ಅಧಿಕಾರವು ಅಧ್ಯಕ್ಷರಿಗೆ ಇದೆ. ಇದು ನಿಯಮಗಳಲ್ಲಿ ಉಲ್ಲೇಖವಾಗಿದೆ.
– ಕಿರಣ್ ರಿಜಿಜು, ಸಂಸದೀಯ ವ್ಯವಹಾರಗಳ ಸಚಿವ

ತಿದ್ದೋಲೆ ಮಂಡನೆ

ನವದೆಹಲಿ: ಮೇಧಾ ವಿ. ಕುಲಕರ್ಣಿ ಅವರು ಸಮಿತಿಯ ವರದಿಗೆ ತಿದ್ದೋಲೆಯೊಂದನ್ನು ಗುರುವಾರ ಮಧ್ಯಾಹ್ನದ ನಂತರ ರಾಜ್ಯಸಭೆಯಲ್ಲಿ ಮಂಡಿಸಿದರು. ವರದಿಯ ಅನುಬಂಧ 5ಕ್ಕೆ ತಿದ್ದೋಲೆಯನ್ನು ಮಂಡಿಸಲಾಗಿದೆ. ‘ಅನುಬಂಧ 5’ ಸಮಿತಿಯ ಸದಸ್ಯರಿಂದ ಸ್ವೀಕರಿಸಿದ ಭಿನ್ನ ಅಭಿಪ್ರಾಯಗಳಿಗೆ ಸಂಬಂಧಿಸಿದೆ. ಮೇಧಾ ಅವರು ಗುರುವಾರ ಬೆಳಿಗ್ಗೆ ವರದಿಯನ್ನು ಮಂಡಿಸಿದ್ದರು. ಈ ತಿದ್ದೋಲೆಯಲ್ಲಿ ಮೊದಲು ಮಂಡಿಸಿದ್ದ ವರದಿಯಿಂದ ಅಳಿಸಿದ್ದ ಅಂಶಗಳು ಇವೆ. ತಿದ್ದೋಲೆಯನ್ನು ಮಂಡಿಸಲಾಗಿದೆ ಎಂದಾದರೆ ಸಚಿವರೊಬ್ಬರು ಸದನವನ್ನು ಈ ಮೊದಲು ತಪ್ಪುದಾರಿಗೆ ಎಳೆದಿರುವುದು ಸಾಬೀತಾಗಿದೆ ಎಂದು ವಿರೋಧ ಪಕ್ಷಗಳ ಸದಸ್ಯರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.