ADVERTISEMENT

ಮಣಿಪುರದಲ್ಲಿ ಎನ್‌ಆರ್‌ಸಿ ಜಾರಿಗೆ ಒತ್ತಾಯ: ಪ್ರಧಾನಿಗೆ ಬಿಜೆಪಿ ಶಾಸಕರ ಪತ್ರ

ಶಾಂತಿ ಮಾತುಕತೆ ಆರಂಭಿಸಿ: ಪ್ರಧಾನಿಗೆ ಪತ್ರ ಬರೆದ ಬಿಜೆಪಿಯ 40 ಶಾಸಕರು

ಪಿಟಿಐ
Published 10 ಆಗಸ್ಟ್ 2023, 11:28 IST
Last Updated 10 ಆಗಸ್ಟ್ 2023, 11:28 IST
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ   ಪಿಟಿಐ ಚಿತ್ರ

ಗುವಾಹಟಿ: ಸಂಘರ್ಷ ಪೀಡಿತ ರಾಜ್ಯದಲ್ಲಿ ಸಂಪೂರ್ಣ ನಿಶ್ಶಸ್ತ್ರೀಕರಣಕ್ಕೆ ಕ್ರಮ ಕೈಗೊಳ್ಳ‌ಬೇಕು ಹಾಗೂ  ಸ್ಥಳೀಯ ಜನರಿಗೆ ಧೈರ್ಯ ತುಂಬುವ ಸಲುವಾಗಿ ಮಣಿಪುರದಲ್ಲಿ ಶೀಘ್ರ ಎನ್‌ಆರ್‌ಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿ ಮಣಿಪುರದ ಆಡಳಿತಾರೂಢ ಬಿಜೆಪಿಯ 40 ಶಾಸಕರು ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಪತ್ರ ಬರೆದಿದ್ದಾರೆ.

ಎನ್ಆರ್‌ಸಿ ಅನುಷ್ಠಾನಕ್ಕಾಗಿ ಮೈತೇಯಿ ಸಮುದಾಯದ ಬೇಡಿಕೆ ಬೆಂಬಲಿಸಿದ ಶಾಸಕರು, ಮಣಿಪುರದಲ್ಲಿ ವಾಸಿಸುವ ಕುಕಿಗಳಿಗೆ ‘ಪ್ರತ್ಯೇಕ ಆಡಳಿತ’ ದ ಬೇಡಿಕೆಯನ್ನು ವಿರೋಧಿಸಿದ್ದಾರೆ. 

ಶಾಂತಿ ಮತ್ತು ಭದ್ರತೆಯ ವಾತಾವರಣ ಬೆಳೆಸಲು ಇಡೀ ರಾಜ್ಯದಲ್ಲಿ ಸಂಪೂರ್ಣ ನಿಶ್ಯಸ್ತ್ರೀಕರಣದ ಅಗತ್ಯವಿದೆ. ಬಂಡಾಯ ಗುಂಪುಗಳು ಮತ್ತು ವಿದೇಶಿ ಪಡೆಗಳಿಗೆ ಸೇರಿದ ಎಲ್ಲಾ ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಗತ್ಯವಿದೆ ಎಂದು ಶಾಸಕರು ಸಹಿ ಮಾಡಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ADVERTISEMENT

ಜಮೀನುಗಳಲ್ಲಿ ಕೆಲಸ ಮಾಡುವ ರೈತರ ಮೇಲಿನ ದಾಳಿ ಬಗ್ಗೆ ಪ್ರಸ್ತಾಪಿಸಿ, ಗುಂಡಿನ ದಾಳಿ ಘಟನೆಗಳಲ್ಲಿ ಭಯೋತ್ಪಾದಕರು ಬಳಸುತ್ತಿರುವ ಶಸ್ತ್ರಾಸ್ತ್ರಗಳು ಅತ್ಯಾಧುನಿಕ ಮಿಲಿಟರಿ ದರ್ಜೆಯ ಶಸ್ತ್ರಾಸ್ತ್ರಗಳಾಗಿವೆ. ಅನೇಕ ಸಂದರ್ಭಗಳಲ್ಲಿ ಗುಂಡಿನ ದಾಳಿಗಳು ಕೇಂದ್ರ ಭದ್ರತಾ ಪಡೆಗಳ ಸಮ್ಮುಖದಲ್ಲಿ ಸಂಭವಿಸಿವೆ. ಅಸ್ಸಾಂ ರೈಫಲ್ಸ್‌ನ ಮೂರು ಘಟಕಗಳನ್ನು (9, 22 ಮತ್ತು 37)  ಪ್ರಸ್ತುತ ಸ್ಥಳಗಳಿಂದ (ಬೆಟ್ಟಗಳು) ವರ್ಗಾಯಿಸಬೇಕು ಅವರು ಒತ್ತಾಯಿಸಿದ್ದಾರೆ.

ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳೊಂದಿಗೆ ರಾಜ್ಯಕ್ಕೆ ದೊಡ್ಡ ಪ್ರಮಾಣದ ವಿದೇಶಿ ಒಳನುಸುಳುವಿಕೆ ನಡೆದಿದೆ. ರಾಜ್ಯಕ್ಕೆ ಪೂರೈಕೆ ಆಗುತ್ತಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಮದ್ದುಗುಂಡು ಹಾಗೂ ಹಣದ ಮೂಲದ ಬಗ್ಗೆ ತನಿಖೆ ಮಾಡಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ. 

ಸಂಘರ್ಷದ ಸಮಸ್ಯೆಯನ್ನು ರಾಜಕೀಯವಾಗಿ ಪರಿಹರಿಸಬೇಕು. ಸ್ಥಳೀಯ ಜನರಿಗೆ ಧೈರ್ಯ ತುಂಬುವ ಸಲುವಾಗಿ ಮಣಿಪುರದಲ್ಲಿ ಶೀಘ್ರ ಎನ್‌ಆರ್‌ಸಿ ಜಾರಿಗೆ ತರಬೇಕು ಎಂದು‌ ಸಲಹೆ ಶಾಸಕರು ನೀಡಿದ್ದಾರೆ. ಈ  ಬಿಕ್ಕಟ್ಟಿಗೆ ಶಾಶ್ವತ ಪರಿಹಾರಕ್ಕಾಗಿ ಶಾಂತಿ ಮಾತುಕತೆ ಪ್ರಾರಂಭಿಸಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.