ADVERTISEMENT

ಅಧ್ಯಾಪಕ ಹುದ್ದೆ ಹಿಂದೂಗಳಿಗೆ ಮಾತ್ರ: ವಿವಾದ ಸೃಷ್ಟಿಸಿದ ಜಾಹೀರಾತು

ಇ.ಟಿ.ಬಿ ಶಿವಪ್ರಿಯನ್‌
Published 18 ಅಕ್ಟೋಬರ್ 2021, 19:30 IST
Last Updated 18 ಅಕ್ಟೋಬರ್ 2021, 19:30 IST
ಎಂ.ಕೆ. ಸ್ಟಾಲಿನ್‌
ಎಂ.ಕೆ. ಸ್ಟಾಲಿನ್‌   

ಚೆನ್ನೈ: ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಹೊಸದಾಗಿ ಕೊಲತ್ತೂರ್‌ನಲ್ಲಿ ಆರಂಭಿಸುತ್ತಿರುವ ಕಾಲೇಜಿನ ಅಧ್ಯಾಪಕ ಹುದ್ದೆ ನೇಮಕಾತಿಯು ವಿವಾದಕ್ಕೆ ಕಾರಣವಾಗಿದೆ. ನೇಮಕಾತಿಗೆ ಅರ್ಜಿ ಆಹ್ವಾನ ಜಾಹೀರಾತಿನಲ್ಲಿ ‘ಹಿಂದೂಗಳು ಮಾತ್ರ ಅರ್ಜಿ ಸಲ್ಲಿಸಬಹುದು’ ಎಂಬ ಉಲ್ಲೇಖವು ವಿವಾದಕ್ಕೆ ಕಾರಣವಾಗಿರುವ ಅಂಶ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು ವಿಧಾನಸಭೆಯಲ್ಲಿ ಕೊಲತ್ತೂರ್‌ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಅರುಳ್ಮಿಗು ಕಪಾಲೀಶ್ವರಾರ್‌ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ನೇರ ಸಂದರ್ಶನವು ಅಕ್ಟೋಬರ್‌ 18ರಂದು ನಡೆಯಲಿದೆ. ಹಿಂದೂಗಳು ಮಾತ್ರ ಅರ್ಜಿ ಸಲ್ಲಿಸಬಹುದು ಎಂಬ ಜಾಹೀರಾತು ತಮಿಳುನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಈಜಾಹೀರಾತನ್ನು ಹಲವರು ವಿರೋಧಿಸಿದ್ದಾರೆ. ಡಿಎಂಕೆಯ ಬೆಂಬಲಿಗರೂ ಈ ಕ್ರಮವನ್ನು ಖಂಡಿಸಿದ್ದಾರೆ. ಅಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಹಿಂದೂಗಳು ಮಾತ್ರವೇ ಏಕೆ ಆಗಿರಬೇಕು ಎಂದು ಪ್ರಶ್ನಿಸಿದ್ದಾರೆ.

ಮುಂದಿನ ವರ್ಷದ ವೇಳೆಗೆ 10 ಕಾಲೇಜುಗಳನ್ನು ಆರಂಭಿಸುವುದಾಗಿ ಧಾರ್ಮಿಕ ದತ್ತಿ ಇಲಾಖೆ ಹೇಳಿತ್ತು. ಆ ಕಾಲೇಜುಳ ಪೈಕಿ ಇದೂ ಒಂದು.

ADVERTISEMENT

ಡಿಎಂಕೆ ಮತ್ತು ಸ್ಟಾಲಿನ್‌ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ದ್ರಾವಿಡರ್‌ ಕಳಗಂ ಅಧ್ಯಕ್ಷ ಕೆ. ವೀರಮಣಿ ಅವರು ಕಾಲೇಜು ತೆರೆಯುವ ಧಾರ್ಮಿಕ ದತ್ತಿ ಇಲಾಖೆಯ ಯೋಜನೆಯನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಈ ಜಾಹೀರಾತನ್ನು ‘ಅಸಾಂವಿಧಾನಿಕ’ ಎಂದು ಕರೆದಿದ್ದಾರೆ. ಒಂದು ಶಿಕ್ಷಣ ಸಂಸ್ಥೆಯ ಸಿಬ್ಬಂದಿ ನೇಮಕಕ್ಕಾಗಿ ಜಾಹೀರಾತು ನೀಡಿರುವ ಕಾರಣ, ಅರ್ಜಿ ಹಾಕಲು ಅರ್ಹತೆ ಇರುವ ಎಲ್ಲರಿಗೂ ಅವಕಾಶ ನೀಡಬೇಕು. ಅರ್ಚಕ ಹುದ್ದೆ ಮತ್ತು ದೇವಸ್ಥಾನದ ಇತರ ಹುದ್ದೆಗಳಿಗೆ ಮಾತ್ರ ಹಿಂದೂಗಳ ಅರ್ಜಿಯನ್ನಷ್ಟೇ ಆಹ್ವಾನಿಸಬಹುದು. ಆದರೆ ಈ ನಿಯಮ ಶಿಕ್ಷಕರ ನೇಮಕಾತಿಗೆ ಅನ್ವಯ ಆಗುವುದಿಲ್ಲ. ಈ ಅರ್ಜಿಗೆ ಸಂಬಂಧಿಸಿದಂತೆ ನಾಳೆ ಯಾರಾದರೂ ಕೋರ್ಟ್ ಮೆಟ್ಟಿಲೇರಿದರೆ, ಕೋರ್ಟ್‌ನಲ್ಲಿ ಈ ಇಲಾಖೆಗೆ ಸೋಲುಂಟಾಗುವುದು ಖಚಿತ ಎಂದಿದ್ದಾರೆ.

‘ಜಾಹೀರಾತು ನ್ಯಾಯಬದ್ಧ’

ಧಾರ್ಮಿಕ ದತ್ತಿ ಇಲಾಖೆಯ ಮಾಜಿ ಅಧಿಕಾರಿಯೊಬ್ಬರು ಇಲಾಖೆಯ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹಿಂದೂಗಳು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಇಲಾಖೆ ನೀಡಿರುವ ಜಾಹೀರಾತಿನಲ್ಲಿ ಯಾವ ತಪ್ಪೂ ಇಲ್ಲ. ಧಾರ್ಮಿಕ ದತ್ತಿ ಕಾಯ್ದೆ ಪ್ರಕಾರ ದೇವಸ್ಥಾನಗಳಿಗೆ ಬರುವ ಆದಾಯವನ್ನು ಹಿಂದೂಗಳಿಗಾಗಿ ಮಾತ್ರ ವ್ಯಯಿಸಬೇಕು. ಕಾಲೇಜನ್ನು ದೇವಸ್ಥಾನ ನಿರ್ವಹಿಸುತ್ತಿದೆ ಮತ್ತು ಇಲ್ಲಿಯ ಉದ್ಯೋಗಿಗಳಿಗೆ ವೇತನವನ್ನು ದೇವಸ್ಥಾನ ಮಂಡಳಿಯಿಂದಲೇ ನೀಡುವುದರಿಂದ ಉದ್ಯೋಗವನ್ನು ಹಿಂದೂಗಳಿಗೆ ಮಾತ್ರ ನೀಡಬೇಕಾಗುತ್ತದೆ. ಹಾಗಾಗಿ ಹಿಂದೂಗಳು ಮಾತ್ರ ಅರ್ಜಿ ಸಲ್ಲಿಸಬಹುದು ಎಂಬ ನಿಲುವನ್ನು ಟೀಕಿಸಲು ಸಾಧ್ಯವಿಲ್ಲ. ಆದರೆ ಈ ನೀತಿ ವಿದ್ಯಾರ್ಥಿಗಳಿಗೆ ಅನ್ವಯವಾಗುವುದಿಲ್ಲ. ಏಕೆಂದರೆ ಅವರಿಗೆ ದೇವಸ್ಥಾನದಿಂದ ಯಾವ ವೇತನವೂ ಸಂದಾಯ ಆಗುವುದಿಲ್ಲ ಎಂದಿದ್ದಾರೆ.

ಡಿಎಂಕೆಯ ಮಿತ್ರ ಪಕ್ಷವಾದ ವಿದುತಲೈ ಚಿರುತಾಯಿಗಳ್‌ ಕಚ್ಚಿಯ ಪ್ರಧಾನ ಕಾರ್ಯದರ್ಶಿ ಡಿ. ರವಿಕುಮಾರ್ ಕೂಡಾ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಸರ್ಕಾರವು ಈಇಲಾಖೆಯ ಅಡಿ ಮತ್ತಷ್ಟು ಇಂಥ ಕಾಲೇಜುಗಳನ್ನು ತೆರೆಯಬೇಕು. ಆದಷ್ಟು ಬೇಗ ಬಡವರಿಗಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳನ್ನೂ ತೆಗೆಯಬೇಕು. ಆದರೆ ನೇಮಕಾತಿಗಳು ಕಾನೂನಿನ ಅನ್ವಯವೇ ನಡೆಯಬೇಕು ಎಂದಿದ್ದಾರೆ.

‘ಕಾಯ್ದೆ ಮೀರಿಲ್ಲ’

ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯ್ದೆ–1959ರ ಸೆಕ್ಷನ್‌ 10ರ ಪ್ರಕಾರ ಈ ಜಾಹೀರಾತು ನ್ಯಾಯ ಸಮ್ಮತವಾಗಿಯೇ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ‘ಈ ಕಾಯ್ದೆ ಅಡಿ ನೇಮಕವಾಗುವ ಆಯುಕ್ತರು, ಎಲ್ಲಾ ಉಪ ಮತ್ತು ಸಹಾಯಕ ಆಯುಕ್ತರು, ಇತರ ಎಲ್ಲಾ ಅಧಿಕಾರಿಗಳು ಅಥವಾ ಈ ಕಾಯ್ದೆಯ ಉದ್ದೇಶಗಳನ್ನು ನಿರ್ವಹಿಸುವ ಸಲುವಾಗಿ ನೇಮಕಗೊಳ್ಳುವ ಸೇವಕರು ಕಡ್ಡಾಯವಾಗಿ ಹಿಂದೂ ಧರ್ಮ ಅನುಸರಿಸುವವರುಆಗಿರಬೇಕು. ಹಿಂದೂ ಧರ್ಮವನ್ನು ಅನುಸರಿಸುವುದನ್ನು ನಿಲ್ಲಿಸಿದ ಕ್ಷಣದಿಂದಲೇ ಅವರು ಈ ಹುದ್ದೆಯಲ್ಲಿ ಮುಂದುವರಿಯುವ ಅವಕಾಶ ಕಳೆದುಕೊಳ್ಳುತ್ತಾರೆ’ ಎಂದು ಕಾಯ್ದೆಯಲ್ಲಿ ಹೇಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.