ADVERTISEMENT

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ತಡೆಗೆ ಸುಪ್ರೀಂ ಕೋರ್ಟ್‌ ನಕಾರ

ಪಿಟಿಐ
Published 19 ಮಾರ್ಚ್ 2024, 23:25 IST
Last Updated 19 ಮಾರ್ಚ್ 2024, 23:25 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ ನಿಯಮಗಳ ಜಾರಿಗೆ ತಡೆ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಮೂರು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಇತ್ಯರ್ಥಪಡಿಸುವವರೆಗೆ ನಿಯಮಗಳ ಜಾರಿಗೆ ತಡೆ ನೀಡಬೇಕು ಎಂದು ಕೋರಿ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಆದರೆ, ಕಾಯ್ದೆಯ ಜಾರಿಗೆ ಅನುವು ಮಾಡಿಕೊಡುವ ನಿಯಮಗಳಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿ ಸಿದೆ. ಕಾಯ್ದೆಯು ಯಾವುದೇ ವ್ಯಕ್ತಿಯ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠಕ್ಕೆ ತಿಳಿಸಿದೆ.

ADVERTISEMENT

ನಿಯಮಗಳ ಜಾರಿಗೆ ತಡೆ ಕೋರಿ 20 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳ ವಿಚಾರಣೆ ನಡೆಸುತ್ತಿರುವ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರೂ ಇದ್ದಾರೆ.

‘ನಾವು ಯಾವುದೇ ಮೇಲ್ನೋಟದ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ... ನಾವು ಅರ್ಜಿದಾರರ ವಾದವನ್ನು ಹಾಗೂ ಇನ್ನೊಂದು ಕಡೆಯವರ ವಾದವನ್ನು ಆಲಿಸಬೇಕಿದೆ’ ಎಂದು ಪೀಠವು ಹೇಳಿದೆ. ವಿಚಾರಣೆಯನ್ನು ಏಪ್ರಿಲ್‌ 9ಕ್ಕೆ ನಿಗದಿ ಮಾಡಲಾಗಿದೆ. ಕೇಂದ್ರ ಸರ್ಕಾರವು ಸಿಎಎ ಜಾರಿಗೆ ಅಗತ್ಯವಿರುವ ನಿಯಮಗಳನ್ನು ಮಾರ್ಚ್ 11ರಂದು ಅಧಿಸೂಚನೆಯಲ್ಲಿ ಪ್ರಕಟಿಸಿದೆ. 

ವಿಚಾರಣೆ ಪೂರ್ಣಗೊಳ್ಳುವವರೆಗೆ ಕಾಯ್ದೆಯ ಅಡಿಯಲ್ಲಿ ಯಾರಿಗೂ ಪೌರತ್ವ ನೀಡುವುದಿಲ್ಲ ಎಂದು ಕೇಂದ್ರವು ಹೇಳಿಕೆ ನೀಡಬೇಕು ಎಂದು ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಕೋರಿದರು. ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಿದ್ದರು.

ಬಲೂಚಿಸ್ತಾನದಲ್ಲಿ ದೌರ್ಜನ್ಯಕ್ಕೆ ಗುರಿಯಾದ ಹಿಂದೂ ಒಬ್ಬರು 2014ರ ಡಿಸೆಂಬರ್‌ಗೆ ಮೊದಲು ಭಾರತಕ್ಕೆ ಬಂದಿದ್ದು, ಅವರಿಗೆ ಇಲ್ಲಿನ ಪೌರತ್ವ ನೀಡಿದಲ್ಲಿ ಇತರರ ಹಕ್ಕುಗಳಿಗೆ ಹೇಗೆ ತೊಂದರೆ ಆಗುತ್ತದೆ ಎಂದು ವಕೀಲರೊಬ್ಬರು ಪ್ರಶ್ನಿಸಿದರು. ‘ಏಕೆಂದರೆ, ಅವರಿಗೆ ಮತದಾನದ ಹಕ್ಕು ಸಿಗುತ್ತದೆ’ ಎಂದು ಇಂದಿರಾ ಅವರು ಪ್ರತ್ಯುತ್ತರ ನೀಡಿದರು.

ಮಂಗಳವಾರದ ವಿಚಾರಣೆ ಕೊನೆ ಯಲ್ಲಿ ಇಂದಿರಾ ಅವರು, ಈ ಕಾಯ್ದೆಯ ಅಡಿಯಲ್ಲಿ ನೀಡಲಾಗುವ ಪೌರತ್ವವು ಸುಪ್ರೀಂ ಕೋರ್ಟ್‌ ನೀಡುವ ತೀರ್ಪಿಗೆ ಬದ್ಧವಾಗಿ ಇರಬೇಕು ಎಂದು ಕೋರ್ಟ್ ಹೇಳಬಹುದು ಎಂದರು. ಹೊಸ ನಿಯಮಗಳ ಅಡಿಯಲ್ಲಿ ಪೌರತ್ವ ನೀಡಲು ಅಗತ್ಯವಿರುವ ‘ಮೂಲಸೌಕರ್ಯವನ್ನು ಅವರು ಹೊಂದಿಲ್ಲ’ ಎಂದು ಪೀಠವು ಮೌಖಿಕವಾಗಿ ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.