ADVERTISEMENT

ರೈತರ ಪ್ರತಿಭಟನೆ: ಮಾತುಕತೆಗಾಗಿ ಕಾಯ್ದೆ ತಡೆ ಹಿಡಿಯುವಂತೆ ‘ಸುಪ್ರೀಂ’ ಸಲಹೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 20:02 IST
Last Updated 17 ಡಿಸೆಂಬರ್ 2020, 20:02 IST
ಭಾರತೀಯ ಕಿಸಾನ್‌ ಯೂನಿಯನ್‌ ಅಧ್ಯಕ್ಷ ನರೇಶ್‌ ಟಿಕಾಯತ್‌ ಅವರು ಗುರುವಾರ ಗಾಜಿಯಾಬಾದ್‌ ಗಡಿಯಲ್ಲಿ ಪ್ರತಿಭಟನಕಾರರ ಜತೆಗೆ - -–ಪಿಟಿಐ ಚಿತ್ರ
ಭಾರತೀಯ ಕಿಸಾನ್‌ ಯೂನಿಯನ್‌ ಅಧ್ಯಕ್ಷ ನರೇಶ್‌ ಟಿಕಾಯತ್‌ ಅವರು ಗುರುವಾರ ಗಾಜಿಯಾಬಾದ್‌ ಗಡಿಯಲ್ಲಿ ಪ್ರತಿಭಟನಕಾರರ ಜತೆಗೆ - -–ಪಿಟಿಐ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ‘ಸುಧಾರಣೆ’ಗಾಗಿ ಇತ್ತೀಚೆಗೆ ಜಾರಿಗೆ ತಂದಿರುವ ಮೂರು ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವ ರೈತರಿಗೆ ಅಹಿಂಸಾತ್ಮಕವಾದ ಪ್ರತಿಭಟನೆ ನಡೆಸಲು ಸಂಪೂರ್ಣ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಅಭಿಪ್ರಾಯಪಟ್ಟಿದೆ.

ಈಗ ಸೃಷ್ಟಿಯಾಗಿರುವ ಬಿಕ್ಕಟ್ಟು ಪರಿಹರಿಸುವುದಕ್ಕಾಗಿ ಕೃಷಿ ಪರಿಣತರು ಮತ್ತು ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ತಾನು ರಚಿಸಲಿರುವುದರಿಂದ, ಮೂರು ಕಾಯ್ದೆಗಳ ಜಾರಿಯನ್ನು ಸರ್ಕಾರವು ತಡೆ ಹಿಡಿಯಬಹುದು ಎಂಬ ಸಲಹೆಯನ್ನೂ ನ್ಯಾಯಾಲಯವು ಮುಂದಿಟ್ಟಿದೆ.

ಮುಕ್ತ ಸಂಚಾರ ಮತ್ತು ಅಗತ್ಯ ವಸ್ತುಗಳು ಹಾಗೂ ಇತರ ಪೂರೈಕೆಗಳನ್ನು ಪಡೆದುಕೊಳ್ಳುವ ಜನರ ಮೂಲಭೂತ ಹಕ್ಕನ್ನು ರೈತರ ಪ್ರತಿಭಟನೆಯ ಹಕ್ಕು ಮೊಟಕು ಮಾಡಬಾರದು. ಪ್ರತಿಭಟನೆಯ ಹಕ್ಕು ಎಂದರೆ ನಗರ ಪ್ರವೇಶದ ಮಾರ್ಗಗಳನ್ನು ಬಂದ್‌ ಮಾಡುವುದು ಅಲ್ಲ ಎಂದೂ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ನೇತೃತ್ವದ ಪೀಠವು ಹೇಳಿದೆ.

ADVERTISEMENT

ರೈತರ ಪ್ರತಿಭಟನೆಗೆ ಸಂಬಂಧಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿದೆ. ‘ರೈತರ ಪ್ರತಿಭಟನೆಯು ಯಾವುದೇ ತೊಡಕು ಇಲ್ಲದೆ ಮುಂದುವರಿಯಲು ಅವಕಾಶ ಕೊಡಬೇಕು. ಅದೇ ಹೊತ್ತಿಗೆ, ಪ್ರತಿಭಟನಕಾರರು ಅಥವಾ ಪೊಲೀಸರಿಂದ ಶಾಂತಿಭಂಗದ ಕೆಲಸವೂ ಆಗಬಾರದು ಎಂಬುದು ತನ್ನ ನಿಲುವು’ ಎಂದು ಪೀಠವು ಹೇಳಿದೆ.

ಹಾಗೆಯೇ, ಪ್ರತಿಭಟನಕಾರರು ಹಿಂಸೆಗೆ ಇಳಿಯುವಂತೆ ಪೊಲೀಸ್‌ ಮತ್ತು ಇತರ ಪ್ರಾಧಿಕಾರಗಳು ಕುಮ್ಮಕ್ಕು ನೀಡಬಾರದು ಎಂದೂ ಹೇಳಿದೆ.

ತಾನು ರಚಿಸುವ ಸಮಿತಿಯಲ್ಲಿ ಪಿ.ಸಾಯಿನಾಥ್‌ ಅವರಂತಹ ಪರಿಣತರನ್ನು ಸೇರಿಸಲು ಬಯಸುವುದಾಗಿಯೂ ಪೀಠ ಹೇಳಿದೆ. ರೈತರು ಮತ್ತು ಸರ್ಕಾರದ ಪ್ರತಿನಿಧಿಗಳು ಮಾತುಕತೆ ನಡೆಸಿದರೆ ಮಾತ್ರ ಪ್ರತಿಭಟನೆಯ ಉದ್ದೇಶ ಈಡೇರಲು ಸಾಧ್ಯ. ಈ ಮಾತುಕತೆಗೆ ನೆರವು ನೀಡಲು ಬಯಸುವುದಾಗಿಯೂ‌ ಪೀಠ ಸ್ಪಷ್ಟಪಡಿಸಿತು. ಸಮಿತಿ ರಚಿಸುವುದಾಗಿ ಪೀಠವು ಬುಧವಾರವೇ ಹೇಳಿತ್ತು.

ಕಾಯ್ದೆಗಳ ಜಾರಿಯನ್ನು ತಡೆ ಹಿಡಿಯಬೇಕು ಎಂಬ ಸಲಹೆಯನ್ನು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ವಿರೋಧಿಸಿ
ದರು. ಕಾಯ್ದೆಗಳನ್ನು ತಡೆ ಹಿಡಿದರೆ ರೈತರು ಸಂಧಾನಕ್ಕೆ ಬರುವುದೇ ಇಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

ಬಿಜೆಪಿಗೆ ‘ಬಿಸಿತುಪ್ಪ’
ಕೃಷಿ ಮಸೂದೆಗಳು ಬಿಜೆಪಿಗೆ ‘ಬಿಸಿ ತುಪ್ಪ’ದಂತಾಗಿದೆ. ಸದ್ಯದ ಬಿಕ್ಕಟ್ಟಿಗೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹಿರಿಯ ಸಚಿವರು ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳ ಜತೆಗೆ ಗುರುವಾರ ಮಾತುಕತೆ ನಡೆಸಿದ್ದಾರೆ.

ಶಿರೋಮಣಿ ಅಕಾಲಿ ದಳವು (ಎಸ್ಎಡಿ) ಸೆಪ್ಟೆಂಬರ್‌ನಲ್ಲಿಯೇ ಎನ್‌ಡಿಎ ತೊರೆದಿದೆ. ರಾಜಸ್ಥಾನದ ಮಿತ್ರಪಕ್ಷ ಆರ್‌ಎಲ್‌ಡಿ ಮತ್ತು ಹರಿಯಾಣದ ಮಿತ್ರಪಕ್ಷ ಜೆಜೆಪಿಗೆ ಕೃಷಿ ಕಾಯ್ದೆಗಳ ಬಗ್ಗೆ ಅತೃಪ್ತಿ ಇದೆ. ‘ಕಾಯ್ದೆಗಳನ್ನು ರದ್ದು ಮಾಡಿ’ ಎಂದು ಆರ್‌ಎಲ್‌ಡಿ ಬಹಿರಂಗವಾಗಿಯೇ ಹೇಳಿದೆ. ಹರಿಯಾಣದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಭಾಗವಾಗಿ ಜೆಜೆಪಿ ಇದೆ. ರೈತರ ಪ್ರತಿಭಟನೆಗೆ ಬೆಂಬಲ ನೀಡುವಂತೆ ಪಕ್ಷದ ನಾಯಕ ದುಷ್ಯಂತ್‌ ಚೌತಾಲಾ ಅವರನ್ನುಜೆಜೆಪಿಯ ಶಾಸಕರು ಒತ್ತಾಯಿಸುತ್ತಿದ್ದಾರೆ. ಸ್ವದೇಶಿ ಜಾಗರಣ್‌ ಮಂಚ್‌ ಮತ್ತು ಭಾರತೀಯ ಕಿಸಾನ್‌ ಯೂನಿಯನ್‌, ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಹೇಳುತ್ತಿವೆ. ಇವೆರಡೂ ಆರ್‌ಎಸ್‌ಎಸ್‌ನ ಅಂಗ ಸಂಸ್ಥೆಗಳು.

ರೈತರ ಪ್ರತಿಭಟನೆಯು ಸುದೀರ್ಘ ಕಾಲ ಮುಂದುವರಿದರೆ ಕಷ್ಟವಾಗಬಹುದು ಎಂಬುದು ಬಿಜೆಪಿ ನಾಯಕರಿಗೆ ಅರಿವಾಗಿದೆ. ಪ್ರತಿಭಟನೆ ಕೊನೆಗೊಳಿಸುವ ಕ್ರಮ ಕೈಗೊಳ್ಳುವಂತೆ ಪಕ್ಷದಲ್ಲಿ ಒತ್ತಡ ಹೆಚ್ಚಾಗಿದೆ ಎಂದು ಮೂಲಗಳು ಹೇಳುತ್ತಿವೆ. ಅದರ ಫಲವಾಗಿಯೇ, ಸಚಿವರಾದ ನಿರ್ಮಲಾ ಸೀತಾರಾಮನ್‌, ಪೀಯೂಷ್‌ ಗೋಯಲ್‌, ನರೇಂದ್ರ ಸಿಂಗ್‌ ತೋಮರ್‌, ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿ, ದುಷ್ಯಂತ್‌ ಗೌತಮ್‌ ಮತ್ತು ಅರುಣ್‌ ಸಿಂಗ್ ಜತೆಗೆಶಾ ಅವರು ಮಾತುಕತೆ ನಡೆಸಿದ್ದಾರೆ.

ತೋಮರ್‌ ಪತ್ರ
ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ರೈತರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮುಂದುವರಿಯುವ ಭರವಸೆ ಕೊಟ್ಟಿದ್ದಾರೆ. ಆರು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕೈಗೊಂಡಿರುವ ರೈತಪರ ಕ್ರಮಗಳನ್ನು ವಿವರಿಸಿದ್ದಾರೆ.

ಈಗ ಜಾರಿಗೆ ಬಂದಿರುವ ಮೂರು ಕಾಯ್ದೆಗಳು ರೈತರಿಗೆ ಹೇಗೆ ಪ್ರಯೋಜನಕಾರಿ ಎಂಬುದನ್ನು ವಿವರಿಸುವ 100 ಪುಟಗಳ ಇ–ಪುಸ್ತಕವನ್ನು ಪ್ರಕಟಿಸಲಾಗಿದೆ. ಈ ಕಾಯ್ದೆಗಳಿಂದಾದ ಯಶೋಗಾಥೆಗಳು ಪುಸ್ತಕದಲ್ಲಿ ಇವೆ.

ಕಾಯ್ದೆ ಪ್ರತಿ ಹರಿದ ಕೇಜ್ರಿವಾಲ್‌
ದೆಹಲಿ ವಿಧಾನಸಭೆಯ ಅಧಿವೇಶನವು ಗುರುವಾರ ನಾಟಕೀಯ ದೃಶ್ಯಗಳಿಗೆ ಸಾಕ್ಷಿಯಾಯಿತು. ಮೂರು ಕೃಷಿ ಕಾಯ್ದೆಗಳ ಪ್ರತಿಗಳನ್ನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಅಧಿವೇಶನದಲ್ಲಿ ಹರಿದು ಹಾಕಿದರು. ಮೂರು ಕಾಯ್ದೆಗಳನ್ನು ತಿರಸ್ಕರಿಸುವ ನಿರ್ಣಯವನ್ನು ವಿಧಾನಸಭೆಯು ಅಂಗೀಕರಿಸಿತು.

ಕೋವಿಡ್‌ ಸಾಂಕ್ರಾಮಿಕದ ನಡುವೆಯೇ ಈ ಮಸೂದೆಗಳನ್ನುಸಂಸತ್ತಿನಲ್ಲಿ ತರಾತುರಿಯಲ್ಲಿ ಅಂಗೀಕರಿಸಲಾಗಿದೆ. ರೈತರನ್ನು ವಂಚಿಸಲು ತಮಗೆ ಸಾಧ್ಯವಿಲ್ಲ ಎಂದು ಕೇಜ್ರಿವಾಲ್‌ ಹೇಳಿದರು.

ನಿರ್ಣಯ ಅಂಗೀಕಾರದ ಬಳಿಕ, ಎಎಪಿ ಶಾಸಕರು ಸ್ಪೀಕರ್‌ ಪೀಠದ ಮುಂದೆ ಜಮಾಯಿಸಿ ಕಾಯ್ದೆಗಳ ಪ್ರತಿಗಳನ್ನು ಹರಿದು ಹಾಕಿದರು. ಮೂರೂ ಕಾನೂನುಗಳನ್ನು ರದ್ದುಪಡಿಸುವಂತೆ ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.