ADVERTISEMENT

ಕೋವಿಡ್–19 | ಸೋಂಕು ನಾಶಕ ‘ರ‍್ಯಾಕೆಟ್‌’ ಆವಿಷ್ಕಾರ

ಪಿಟಿಐ
Published 18 ಏಪ್ರಿಲ್ 2020, 0:43 IST
Last Updated 18 ಏಪ್ರಿಲ್ 2020, 0:43 IST
ಕೊರೊನಾ ವೈರಸ್
ಕೊರೊನಾ ವೈರಸ್   

ನವದೆಹಲಿ: ಕೊರೊನಾ ವೈರಸ್‌ ಪ್ರತಿಬಂಧಕ ಔಷಧಿಯ ಸಂಶೋಧನೆ ನಡೆಯುತ್ತಿದ್ದರೆ, ಇನ್ನೊಂದೆಡೆ, ನಾವು ಬಳಸುವ ವಿವಿಧ ವಸ್ತುಗಳಿಗೆ ಅಂಟಿರಬಹುದಾದ ಸೋಂಕು ನಾಶಪಡಿಸುವ ಸಾಧನಗಳ ಆವಿಷ್ಕಾರದಲ್ಲಿಯೂ ವಿಜ್ಞಾನಿಗಳು ನಿರತರಾಗಿದ್ದಾರೆ.

ಪಂಜಾಬ್‌ನ ಲವ್ಲಿ ಪ್ರೊಫೆಷನಲ್‌ ಯುನಿವರ್ಸಿಟಿಯ (ಎಲ್‌ಪಿಯು) ತಜ್ಞರು ನೇರಳಾತೀತ ಕಿರಣಗಳನ್ನು ಹೊರಸೂಸುವ ರ‍್ಯಾಕೆಟ್‌ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ದಿನಸಿ, ಕೀ, ನೋಟುಗಳು, ವಾಹನಗಳ ಸೇರಿದಂತೆ ಬಹುತೇಕ ಎಲ್ಲ ವಸ್ತುಗಳ ಮೇಲೆ ಈ ರ‍್ಯಾಕೆಟ್‌ಅನ್ನು ಬೀಸಿದರೆ ಸಾಕು, ಮೇಲ್ಮೈಗಳಲ್ಲಿ ಇರಬಹುದಾದ ಸೋಂಕನ್ನು ನಾಶಮಾಡಲು ಸಾಧ್ಯ ಎಂದು ತಜ್ಞರು ಹೇಳಿದ್ದಾರೆ.

ಇದು ಬೃಹತ್‌ ಪ್ರಮಾಣದಲ್ಲಿ ಉತ್ಪಾದನೆಯಾಗಿ, ಮಾರುಕಟ್ಟೆಗೆ ಬಂದರೆ ₹1,000ಗೆ ಲಭ್ಯವಾಗಲಿದೆ ಎಂದು ತಜ್ಞರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ADVERTISEMENT

‘80 ಸೆಂ.ಮೀ. ಉದ್ದದ ಈ ಸಾಧನದಲ್ಲಿ ಅಂಡಾಕಾರದ ಟ್ಯೂಬ್‌ಗಳನ್ನು ಅಳವಡಿಸಲಾಗಿದೆ. ಈ ಟ್ಯೂಬ್‌ಗಳಿಂದ 200–280 ನ್ಯಾನೊಮೀಟರ್‌ ತರಂಗಾಂತರವುಳ್ಳ ನೇರಳಾತೀತ ಕಿರಣಗಳು ಹೊರಸೂಸುತ್ತವೆ. ಈ ಕಿರಣಗಳು ವ್ಯಕ್ತಿಯ ಮೇಲೆ ಬೀಳದಂತೆ ಮತ್ತೊಂದು ರ‍್ಯಾಕೆಟ್‌ನ ಮತ್ತೊಂದು ಬದಿಯನ್ನು ಲೋಹದಿಂದ ಮುಚ್ಚಲಾಗಿದೆ ಎಂದು ಎಲ್‌ಪಿಯುನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಮಂದೀಪ್‌ ಸಿಂಗ್‌ ವಿವಿರಿಸುತ್ತಾರೆ.

‘ಇ–ಕಾಮರ್ಸ್‌ ಕಂಪನಿಗಳು ಪೂರೈಸುವ ಸರಕುಗಳ ಮೇಲೆ, ಆಹಾರ ಪದಾರ್ಥಗಳ ಪೊಟ್ಟಣ, ಬ್ಯಾಗುಗಳ ಮೇಲೆ 4–5 ಅಂಗುಲ ಅಂತರದಲ್ಲಿ ಕೆಲವು ನಿಮಿಷಗಳ ಕಾಲ ಈ ರ‍್ಯಾಕೆಟ್‌ ಬೀಸಿದರೆ ಸೋಂಕು ನಾಶವಾಗುತ್ತದೆ. ಸೋಂಕುನಾಶ ಮಾಡುವಲ್ಲಿ ಈ ಸಾಧನ ಬಹಳಷ್ಟು ಪರಿಣಾಮಕಾರಿ’ ಎಂದೂ ಅವರು ಹೇಳುತ್ತಾರೆ.

‘ನೇರಳಾತೀತ ಕಿರಣಗಳಿಗೆ ಅಡ್ಡಲಾಗಿ ವ್ಯಕ್ತಿ ಬಂದ ತಕ್ಷಣ ಈ ಸಾಧನ ತನ್ನ ಕಾರ್ಯ ನಿಲ್ಲಿಸುತ್ತದೆ. ವ್ಯಕ್ತಿ ಮತ್ತು ಇತರ ವಸ್ತುಗಳನ್ನು ಗ್ರಹಿಸುವ ವ್ಯವಸ್ಥೆ ಇದರಲ್ಲಿದೆ. ಇದರಿಂದ ಚರ್ಮಕ್ಕೆ ಹಾನಿಯಾಗುವುದನ್ನು ತಪ್ಪಿಸಲು ಸಾಧ್ಯವಾಗಲಿದೆ. 60 ಸೆಕೆಂಡ್‌ಗಳ ನಂತರ, ಬೀಪ್‌ ಶಬ್ದದ ಕೇಳಿ ಬರುತ್ತದೆ. ಕೂಡಲೇ ಈ ಸಾಧನ ತನ್ನ ಕಾರ್ಯವನ್ನು ನಿಲ್ಲಿಸುತ್ತದೆ’ ಎಂದು ಈ ಸಾಧನವನ್ನು ಅಭಿವೃದ್ಧಿಪಡಿಸಿರುವ ಎಲ್‌ಪಿಯುನ ವಿದ್ಯಾರ್ಥಿ ಅನಂತಕುಮಾರ್‌ ರಜಪೂತ್‌ ಹೇಳುತ್ತಾರೆ.

ಔಷಧಿ ತಲುಪಿಸಲು ವಾರ್ಡ್‌ಬೋರ್ಡ್

ಪ್ರತ್ಯೇಕಿಸಿದ ಕೇಂದ್ರಗಳಲ್ಲಿ ದಾಖಲಾಗಿರುವ ಕೋವಿಡ್‌–19 ರೋಗಿಗಳಿಗೆ ಆಹಾರ, ಔಷಧಿಗಳನ್ನು ತಲುಪಿಸಬಲ್ಲ ‘ವಾರ್ಡ್‌ಬೋಟ್‌’ ಅಭಿವೃದ್ಧಿಪಡಿಸಲು ಪಂಜಾಬ್‌ನ ಐಐಟಿ–ರೊಪಾರ್‌ನ ಸಂಶೋಧಕರು ಮುಂದಾಗಿದ್ದಾರೆ.

ಇದು ಕಾರ್ಯಗತವಾದಲ್ಲಿ, ಯಾವುದೇ ವ್ಯಕ್ತಿಯ ನೆರವಿಲ್ಲದೇ ರೋಗಿಗಳಿಗೆ ಆಹಾರ, ಔಷಧಿಗಳನ್ನು ತಲುಪಿಸಲು ಸಾಧ್ಯವಾಗಲಿದೆ. ವೈದ್ಯರು ಹಾಗೂ ಆರೊಗ್ಯಸೇವೆ ನಿರತರಿಗೆ, ರೋಗಿಗಳಿಂದ ಸೋಂಕು ತಗಲುವ ಭೀತಿಯೂ ಇರುವುದಿಲ್ಲ ಎಂದು ಸಂಸ್ಥೆಯ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಏಕ್ತಾ ಸಿಂಗ್ಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ರೋಗಿಗೆ ಔಷಧಿ, ಆಹಾರ ತಲುಪಿಸಿ ಮರಳಿದ ಮೇಲೆ ತಾನಾಗಿಯೇ ಸ್ಯಾನಿಟೈಸ್‌ ಮಾಡಿಕೊಳ್ಳಬಲ್ಲ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಆಸ್ಪತ್ರೆಯ ಗೋಡೆಗಳನ್ನು ಸಹ ಸ್ಯಾನಿಟೈಸ್‌ ಮಾಡಬಲ್ಲದು’ ಎಂದು ವಾರ್ಡ್‌ಬೋಟ್‌ನ ವೈಶಿಷ್ಟ್ಯಗಳನ್ನು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.