ADVERTISEMENT

ಕೋವಿಡ್‌ 3ನೇ ಅಲೆ: ದೇಶದ ಕೆಲವಡೆ ಸ್ಥಿರತೆಯ ಮುನ್ಸೂಚನೆ- ಕೇಂದ್ರ ಆರೋಗ್ಯ ಸಚಿವಾಲಯ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 20:10 IST
Last Updated 27 ಜನವರಿ 2022, 20:10 IST
   

ನವದೆಹಲಿ: ಕೊರೊನಾ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತಿರುವ ನಡುವೆಯೇ, ದೇಶದ ಕೆಲ ಭಾಗಗಳಲ್ಲಿ ಕೋವಿಡ್‌ ಮೂರನೇ ಅಲೆಯಲ್ಲಿ ಸ್ಥಿರತೆಯ ಮುನ್ಸೂಚನೆಗಳು ಕಂಡುಬರುತ್ತಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ.

ಸಕ್ರಿಯ ಪ್ರಕರಣಗಳ ಪೈಕಿ ಶೇ 90ಕ್ಕೂ ಹೆಚ್ಚು ಪ್ರಕರಣಗಳಲ್ಲಿ ರೋಗಿಗಳು ಮನೆಯಲ್ಲಿಯೇ ಪ್ರತ್ಯೇಕವಾಸದಲ್ಲಿದ್ದಾರೆ. ಕೋವಿಡ್‌–19 ಈಗ ಸೌಮ್ಯ ಅಥವಾ ಸಾಧಾರಣ ತೀವ್ರತೆಯ ಕಾಯಿಲೆ ಮಟ್ಟದಲ್ಲಿದೆ ಎಂಬುದನ್ನು ಈ ಅಂಶ ತೋರಿಸುತ್ತದೆ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕೋವಿಡ್‌ ದೃಢ ದರ ಕಡಿಮೆಯಾಗುತ್ತಿರುವ ಕೆಲ ಪ್ರದೇಶಗಳಿಗೆ ಸೀಮಿತವಾಗಿ ಮಾತ್ರ ಈ 3ನೇ ಅಲೆಯಲ್ಲಿ ಸ್ಥಿರತೆಯ ಮುನ್ಸೂಚನೆಗಳು ಕಂಡುಬರುತ್ತಿವೆ ಎಂದ ಅವರು, ಯಾವ ಪ್ರದೇಶಗಳಲ್ಲಿ ಸೋಂಕಿನ ಪ್ರಕರಣಗಳಲ್ಲಿ ಇಳಿಕೆ ಕಂಡುಬರುತ್ತಿದೆ ಎಂಬ ವಿವರಗಳನ್ನು ನೀಡಲಿಲ್ಲ.

ADVERTISEMENT

ಒಡಿಶಾ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳನ್ನು ಹೊರತುಪಡಿಸಿ, ಉಳಿದ ರಾಜ್ಯಗಳಲ್ಲಿ ಸಂಗ್ರಹಿಸಿದ ಮಾದರಿಗಳನ್ನು ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಒಳಪಡಿಸಲಾಗಿದೆ. ಇವುಗಳ ಪೈಕಿ ಶೇ 75ರಷ್ಟು ಜನರಲ್ಲಿ ಓಮೈಕ್ರಾನ್‌ ಸೋಂಕು ಇರುವುದು ದೃಢಪಟ್ಟಿದೆ ಎಂದು ಹೇಳಿದ್ದಾರೆ.

3ನೇ ಅಲೆ ಸಂದರ್ಭದಲ್ಲಿ ಲಸಿಕೆ ಪಡೆಯದವರು ಹಾಗೂ ಇತರ ಕಾಯಿಲೆಗಳಿದ್ದವರೇ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌–19ನಿಂದಾಗಿ ಮೃತಪಟ್ಟಿದ್ದು ಹೆಚ್ಚು. ಹೀಗಾಗಿ ಈ ಗುಂಪಿಗೆ ಸೇರಿದವರು ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದ್ದಾರೆ.

ಫೆ.28ರ ವರೆಗೆನಿರ್ಬಂಧಗಳ ವಿಸ್ತರಣೆ

34 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 407 ಜಿಲ್ಲೆಗಳಲ್ಲಿ ಕೋವಿಡ್‌–19 ದೃಢಪ್ರಮಾಣ ಶೇ 10ಕ್ಕೂ ಅಧಿಕವಾಗಿದ್ದು, ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. ಅಲ್ಲದೇ, ಕೋವಿಡ್‌–19 ‍ಪ್ರಸರಣ ತಡೆಗೆ ಸಂಬಂಧಿಸಿ ಜಾರಿಗೊಳಿಸಲಾಗಿರುವ ನಿರ್ಬಂಧಗಳು/ಮಾರ್ಗಸೂಚಿಗಳನ್ನು ಫೆ.28ರವರೆಗೆ ವಿಸ್ತರಿಸಿ ಸಚಿವಾಲಯ ಗುರುವಾರ ಆದೇಶಿಸಿದೆ.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಗೃಹ ಸಚಿವಾಲಯ ಕಾರ್ಯದರ್ಶಿ ಅಜಯ್‌ ಭಲ್ಲಾ, ‘ಕೋವಿಡ್‌–19 ಪಿಡುಗಿನ ಪರಿಣಾಮಕಾರಿ ನಿರ್ವಹಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ಜಿಲ್ಲಾ ಹಾಗೂ ಸ್ಥಳೀಯ ಆಡಳಿತಗಳಿಗೆ ಸೂಚಿಸುವಂತೆ ತಿಳಿಸಿದ್ದಾರೆ.

‘ಓಮೈಕ್ರಾನ್‌ ತಳಿಯಿಂದಾಗಿ ಕೋವಿಡ್‌–19 ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 22 ಲಕ್ಷದ ಗಡಿ ದಾಟಿದೆ’ ಎಂದೂ ಅವರು ಹೇಳಿದ್ದಾರೆ.

‘ಕೋವಿಡ್ ಪೀಡಿತರಲ್ಲಿ ಬಹುತೇಕ ರೋಗಿಗಳು ತ್ವರಿತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವವರ ಪ್ರಮಾಣವೂ ಕಡಿಮೆ ಇದೆ. ಆದರೆ, 407 ಜಿಲ್ಲೆಗಳಲ್ಲಿ ಕೋವಿಡ್‌ ದೃಢ ದರ ಶೇ 10ಕ್ಕಿಂತ ಅಧಿಕ ಇರುವುದು ಕಳವಳಕಾರಿ. ಸೋಂಕು ಪ್ರಸರಣದ ಗತಿಯನ್ನು ಗಮನಿಸಿದರೆ, ಮತ್ತಷ್ಟೂ ಎಚ್ಚರಿಕೆ, ಮುಂಜಾಗ್ರತೆಯ ಅಗತ್ಯವಿದೆ’ ಎಂದು ಅವರು ಹೇಳಿದರು.

ಪತ್ರದಲ್ಲಿನ ಪ್ರಮುಖ ಅಂಶಗಳು

* ಸ್ಥಳೀಯವಾಗಿ ಕೋವಿಡ್‌ ದೃಢ ದರ, ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣದ ಆಧಾರದಲ್ಲಿ ನಿರ್ಬಂಧಗಳ ಜಾರಿ/ಸಡಿಲಿಕೆಗೆ ಸೂಚನೆ

* ಪರೀಕ್ಷೆ, ಪತ್ತೆ, ಚಿಕಿತ್ಸೆ, ಲಸಿಕೆ ನೀಡಿಕೆ ಹಾಗೂ ಕೋವಿಡ್‌–19ಗೆ ಸಂಬಂಧಿಸಿದ ನಡವಳಿಕೆ ಕಾರ್ಯತಂತ್ರ ಅನುಸರಿಸಲು ಸಲಹೆ

* ಮಾಸ್ಕ್‌ ಧರಿಸುವುದು, ವ್ಯಕ್ತಿಗತ ಅಂತರ ಕಾಪಾಡುವುದು ಅಗತ್ಯ

* 141 ಜಿಲ್ಲೆಗಳಲ್ಲಿ ಕೋವಿಡ್‌ ದೃಢ ದರ ಶೇ 5–10ರ ನಡುವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.