ADVERTISEMENT

ಬ್ರಿಟೀಷರಿಂದ ಸಾರ್ವಕರ್ ₹60 ಪಿಂಚಣಿ ಪಡೆದಿದ್ದು ಏಕೆ?: ನಾನಾ ಪಟೋಲೆ ಪ್ರಶ್ನೆ

ಪಿಟಿಐ
Published 19 ನವೆಂಬರ್ 2022, 8:03 IST
Last Updated 19 ನವೆಂಬರ್ 2022, 8:03 IST
   

ಬುಲ್ಧಾನಾ: ಸಾವರ್ಕರ್ ಕುರಿತಾದ ಹೇಳಿಕೆಗೆ ರಾಹುಲ್ ಗಾಂಧಿಯನ್ನು ಟೀಕಿಸುವವರು, ಸಾರ್ವಕರ್ ಏಕೆ ಬ್ರಿಟೀಷರಿಂದ ₹60 ಪಿಂಚಣಿ ಪಡೆದಿದ್ದರು ಎಂಬ ಪ್ರಶ್ನೆಗೆ ಉತ್ತರಿಸಲಿ ಎಂದು ಮಹಾರಾಷ್ಟ್ರದ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾನಾ ಪಟೋಲೆ ಪ್ರಶ್ನಿಸಿದ್ದಾರೆ.

ಗುರುವಾರ ಮಹಾರಾಷ್ಟ್ರದ ಭಾರತ್ ಜೋಡೊ ಯಾತ್ರೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ವಿ.ಡಿ. ಸಾವರ್ಕರ್‌ ಬ್ರಿಟಿಷರಿಗೆ ಸಹಾಯ ಮಾಡಿದ್ದರು ಎಂದು ಆರೋಪಿಸಿದ್ದರು. ಅಲ್ಲದೇ, ಸಾವರ್ಕರ್‌ ಬ್ರಿಟಿಷ್‌ ಆಡಳಿತಕ್ಕೆ ಕ್ಷಮಾಪಣೆ ಪತ್ರ ಬರೆದಿದ್ದರು ಎಂದು ಹೇಳಿದ್ದರು.

ಈ ವೇಳೆ ಪತ್ರವೊಂದನ್ನು ಪ್ರದರ್ಶಿಸಿದ್ದ ರಾಹುಲ್‌, ಇದು ಸಾವರ್ಕರ್‌ ಅವರು ಬ್ರಿಟಿಷ್‌ ಸರ್ಕಾರಕ್ಕೆ ಬರೆದ ಕ್ಷಮಾಪಣೆ ಪತ್ರ. ಇದರಲ್ಲಿ 'ನನ್ನನ್ನು ನಿಮ್ಮ ವಿಧೇಯ ಸೇವಕನನ್ನಾಗಿ ಉಳಿಸಿಕೊಳ್ಳುವಂತೆ ನಾನು ಬೇಡಿಕೊಳ್ಳುತ್ತಿದ್ದೇನೆ' ಎಂದಿರುವ ಪತ್ರದ ಕೊನೆಯ ಸಾಲನ್ನು ರಾಹುಲ್‌ ಗಾಂಧಿ ಓದಿ ಹೇಳಿದ್ದರು. ಪತ್ರದಲ್ಲಿ ವಿ.ಡಿ. ಸಾವರ್ಕರ್‌ ಅವರ ಸಹಿ ಇದೆ ಎಂದು ಒತ್ತಿ ಹೇಳಿದ್ದರು.

ADVERTISEMENT

ಈ ಬಗ್ಗೆ ಬಿಜೆಪಿಯಿಂದ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪಟೊಲೆ, ರಾಹುಲ್ ಗಾಂಧಿಯವರನ್ನು ಟೀಕಿಸುವವರು ಸಾರ್ವಕರ್ ಬ್ರಿಟೀಷರಿಂದ ಪಿಂಚಣಿ ಏಕೆ ಪಡೆದರು ಎಂಬುದಕ್ಕೆ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ.

ರಾಹುಲ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದ ಶಿವಸೇನಾ, ಇಂತಹ ಹೇಳಿಕೆಗಳು ಮಹಾ ವಿಕಾಸ್ ಅಘಾಡಿ ಮೈತ್ರಿಗೆ ಧಕ್ಕೆ ತರಲಿವೆ ಎಂದು ಹೇಳಿತ್ತು.

ಕಾಂಗ್ರೆಸ್ ಭಾರತ್ ಜೋಡೊ ಯಾತ್ರೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ನಾಯಕರು ಒಂದಾಗಿದ್ದು, ಮತ್ತಷ್ಟು ಶಕ್ತಿ ಬಂದಿದೆ ಎಂದು ಪಟೋಲೆ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವು ಸೈದ್ಧಾಂತಿಕ ಚರ್ಚೆ ಮತ್ತು ಜನರನ್ನು ಒಗ್ಗೂಡಿಸುವುದನ್ನು ಬಯಸುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.