ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಪಿಟಿಐ ಚಿತ್ರ
ಮಥುರಾ (ಯುಪಿ): ವಿರೋಧ ಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಯೋಧ್ಯೆಯ ಹೆಸರನ್ನು ಹೇಳಲು ಹಿಂದೇಟು ಹಾಕುತ್ತಿದ್ದವರು ಈಗ ಆಹ್ವಾನ ನೀಡಿದರೆ ರಾಮ ಮಂದಿರ ಉದ್ಘಾಟನೆಗೆ ಆಗಮಿಸುವುದಾಗಿ ಹೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ವೃಂದಾವನದ ಧಾರ್ಮಿಕ ಸಮಾವೇಶವೊಂದರಲ್ಲಿ ಮಾತನಾಡಿದ ಅವರು, ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರದ ರಾಮ ಪ್ರಾಣ ಪ್ರತಿಷ್ಠಾಪನೆಗೆ ವಿರೋಧ ಪಕ್ಷದ ಹಲವು ನಾಯಕರು ಹಾಜರಾಗುವುದಾಗಿ ತಿಳಿಸಿದ್ದಾರೆ ಎಂದರು.
‘ಈ ಹಿಂದೆ ಅಯೋಧ್ಯೆಗೆ ಹೋಗಲು ಮತ್ತು ಅದರ ಹೆಸರು ಹೇಳಲು ಹಿಂದೇಟು ಹಾಕುತ್ತಿದ್ದವರು ಈಗ ಆಹ್ವಾನ ಬಂದರೆ ರಾಮ ಮಂದಿರ ಪ್ರತಿಷ್ಠಾಪನೆಗೆ ನಾವೂ ಹೋಗುತ್ತೇವೆ ಎಂದು ಹೇಳುತ್ತಿದ್ದಾರೆ’ ಎಂದು ಆದಿತ್ಯನಾಥ್ ತಿಳಿಸಿದ್ದಾರೆ.
ಅಯೋಧ್ಯೆಯ ಮೂಲಸೌಕರ್ಯದಲ್ಲಿನ ಬದಲಾವಣೆಯನ್ನು ಶ್ಲಾಘಿಸಿದ ಆದಿತ್ಯನಾಥ್, ಪ್ರಸ್ತುತ ಅಯೋಧ್ಯೆಯು ವಿಶಾಲವಾದ ರಸ್ತೆಗಳು, ಉತ್ತಮ ರೈಲು ನಿಲ್ದಾಣ ಮತ್ತು ವಾಯು ಸಂಪರ್ಕವನ್ನು ಹೊಂದಿದೆ. ಶೀಘ್ರದಲ್ಲೇ ಜಲಮಾರ್ಗಗಳನ್ನು ಹೊಂದಲಿದೆ. ಇದು ಡಬಲ್ ಎಂಜಿನ್ ಸರ್ಕಾರದಲ್ಲಿನ ದೊಡ್ಡ ಬದಲಾವಣೆಯಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತವನ್ನು ಅಭಿವೃದ್ಧಿ ಪಡಿಸಲು ಎಲ್ಲರೂ ಪ್ರತಿಜ್ಞೆ ಮಾಡುವಂತೆ ಆದಿತ್ಯನಾಥ್ ಕರೆ ನೀಡಿದರು. ‘ದೇಶವನ್ನು ರಕ್ಷಿಸಲು 140 ಕೋಟಿ ಭಾರತೀಯರು ಒಟ್ಟಾಗಿ ಕೆಲಸ ಮಾಡಿದಾಗ ಜಗತ್ತು ಭಾರತದ ಶಕ್ತಿಯನ್ನು ಅರಿತುಕೊಳ್ಳುತ್ತದೆ. ಸಮಾಜವನ್ನು ಶಕ್ತಿಯುತವಾಗಿಸಲು ಮಹಿಳೆಯರ ಸುರಕ್ಷತೆ, ಗೌರವ ಮತ್ತು ಸ್ವಾವಲಂಬನೆ ಅತ್ಯಗತ್ಯ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.