ನವದೆಹಲಿ: ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರವನ್ನು 2022ರಲ್ಲಿ ಅಮಾನ್ಯಗೊಳಿಸಲಾಗಿದ್ದರೂ, ಅದೇ ಪ್ರಮಾಣಪತ್ರ ಸಲ್ಲಿಸಿ 2016ರಲ್ಲಿ ಎಂಬಿಬಿಎಸ್ ಕೋರ್ಸ್‌ಗೆ ಆಕೆ ಪಡೆದಿದ್ದ ಪ್ರವೇಶಾತಿಯನ್ನು ಸುಪ್ರೀಂ ಕೋರ್ಟ್ ಅನುಮೋದಿಸಿ ತೀರ್ಪು ನೀಡಿದೆ.
‘ಈ ಪ್ರಕರಣದಲ್ಲಿ, ಮೇಲ್ಮನವಿದಾರ ವಿದ್ಯಾರ್ಥಿನಿ ವರ್ತನೆ ಅನುಚಿತವಾಗಿದೆ. ಆಕೆಯ ವೃತ್ತಿ ಹಾಗೂ ಜೀವನ ಕುರಿತಾದ ಏಕೈಕ ವಿಚಾರ ಗಮನದಲ್ಲಿಟ್ಟುಕೊಂಡು ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಲು ಆಕೆಗೆ ಒಂದು ಅವಕಾಶ ನೀಡಲಾಗುವುದು’ ಎಂದು ನ್ಯಾಯಾಲಯ ಹೇಳಿದೆ.
ಚೈತನ್ಯಾ ಎಂಬುವವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಕೆ.ವಿ.ವಿಶ್ವನಾಥನ್ ನೇತೃತ್ವದ ಪೀಠ ನಡೆಸಿತು.
‘ಎಲ್ಲರಿಗೂ ಕಾನೂನು ಪ್ರಕಾರವೇ ಅವರಿಗೆ ಸಲ್ಲಬೇಕಾದ ಹಕ್ಕುಗಳನ್ನು ನೀಡಬೇಕು. ಆದರೆ, ಈ ಪ್ರಕರಣದಲ್ಲಿ ವಾಸ್ತವ ಸಂಗತಿಗಳು ಹಾಗೂ ಸನ್ನಿವೇಶಗಳನ್ನು ಗಮನಿಸಿದಾಗ, ಮೇಲ್ಮನವಿದಾರರಿಗೆ ಒಂದು ಅವಕಾಶ ನೀಡಬೇಕು ಎಂದು ನಾವು ಭಾವಿಸಿದ್ದೇವೆ’ ಎಂದು ಆಗಸ್ಟ್ 25ರಂದು ನೀಡಿರುವ ತೀರ್ಪಿನಲ್ಲಿ ಪೀಠ ಹೇಳಿದೆ.
‘ಈ ಲೋಪಕ್ಕೆ ಸಂಬಂಧಿಸಿ, ಮೇಲ್ಮನವಿದಾರಳ ತಂದೆ ಹಣದ ರೂಪದಲ್ಲಿ ಪರಿಹಾರ ಒದಗಿಸಬೇಕು. ಎರಡು ತಿಂಗಳ ಒಳಗಾಗಿ ರಾಷ್ಟ್ರೀಯ ರಕ್ಷಣಾ ನಿಧಿಯಲ್ಲಿ ₹5 ಲಕ್ಷ ಠೇವಣಿ ಇರಿಸಬೇಕು’ ಎಂದು ಪೀಠವು ಚೈತನ್ಯಾ ಅವರ ತಂದೆ ಸಂಜೀವ ವಿಠಲರಾವ್ ಪಾಲೇಕರ್ ಅವರಿಗೆ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ, ‘ಮೇಲ್ಮನವಿದಾರ ವಿದ್ಯಾರ್ಥಿನಿ ಪ್ರತಿಭಾವಂತೆಯಾಗಿದ್ದು, ಎಂಬಿಬಿಎಸ್ ಪೂರ್ಣಗೊಳಿಸಿ ಈಗ ಸ್ನಾತಕೋತ್ತರ ಕೋರ್ಸ್ ಮಾಡುತ್ತಿದ್ದಾಳೆ. ತನ್ನ ವೈದ್ಯಕೀಯ ಪದವಿಯನ್ನು ಅನುಮೋದಿಸುವಂತೆ ಕೋರಿ ಆಕೆ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಿದಲ್ಲಿ, ಅದು ಆಕೆಯ ಸಂಪೂರ್ಣ ಕೆರಿಯರ್‌ಗೆ ಅಂತ್ಯ ಹಾಡಿದಂತಾಗಲಿದೆ’ ಎಂದು ಪೀಠ ಹೇಳಿದೆ.
‘ತನ್ನ ಪುತ್ರಿ, ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾಗಿ ಹೇಳಿ ಮುಂದೆ ಯಾವತ್ತೂ ಯಾವ ಪ್ರಯೋಜನವನ್ನೂ ಪಡೆಯುವುದಿಲ್ಲ, ತನ್ನ ಕುಟುಂಬದ ಯಾವ ಸದಸ್ಯ ಕೂಡ ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾಗಿ ಹೇಳಿ ಯಾವ ಪ್ರಯೋಜನವನ್ನು ಪಡೆಯುವುದಿಲ್ಲ ಎಂಬುದಾಗಿ ಆಕೆಯ ತಂದೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಇದನ್ನು ಪರಿಗಣಿಸಿ, ಎಂಬಿಬಿಎಸ್ ಕೋರ್ಸ್‌ಗೆ ಆಕೆ ಪಡೆದಿರುವ ಪ್ರವೇಶವನ್ನು ಕ್ರಮಬದ್ಧಗೊಳಿಸಲಾಗುವುದು’ ಎಂದೂ ಪೀಠ ಹೇಳಿದೆ.
‘ಸಂಬಂಧಪಟ್ಟ ಸಮಿತಿಯು ಮೇಲ್ಮನವಿದಾರಳ ಪ್ರಮಾಣಪತ್ರಗಳನ್ನು ಸರಿಯಾಗಿ ಪರಿಶೀಲನೆ ನಡೆಸಿ, ಆಕೆ ಪರಿಶಿಷ್ಟ ಪಂಗಡಕ್ಕೆ ಸೇರಿದವಳಲ್ಲ ಎಂದು ಘೋಷಿಸಿದ್ದರೆ, ಈ ವಿಚಾರ ಇಷ್ಟೊಂದು ಬೆಳೆಯುತ್ತಿರಲಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪರಿಶಿಷ್ಟ ಪಂಗಡಕ್ಕೆ ಸೇರಿದ ಒಬ್ಬ ಪ್ರತಿಭಾವಂತ ಅಭ್ಯರ್ಥಿಯೊಬ್ಬರು ಎಂಬಿಬಿಎಸ್ ಓದುವ ಅವಕಾಶದಿಂದ ವಂಚಿತಗೊಂಡರಲ್ಲ ಎಂಬ ವಿಚಾರ ಈಗಲೂ ಕಾಡುತ್ತಿದೆಸುಪ್ರೀಂ ಕೋರ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.