ಜಮ್ಮು: ಇಲ್ಲಿನ ಸುಂಜ್ವಾನ್ ಸೇನೆ ನೆಲೆ ಬಳಿ ಇತ್ತೀಚೆಗೆ ನಡೆದ ಎನ್‌ಕೌಂಟರ್ ಸಂಬಂಧ ಸೋಮವಾರ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮೂವರನ್ನು ಹೆಚ್ಚಿನ ವಿಚಾರಣೆಗಾಗಿ ಎನ್‌ಐಎ ನ್ಯಾಯಾಲಯವು 10 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
‘ದಾಳಿಕೋರರನ್ನು ಸಾಂಬಾದ ಸಪ್ವಾಲ್ ಗಡಿಯಿಂದ ಸುಂಜ್ವಾನ್ ಪ್ರದೇಶಕ್ಕೆ ಮಿನಿ ಟ್ರಕ್‌ನಲ್ಲಿ ಕರೆತಂದ ಕೋಕರ್‌ನಾಗ್ ಪ್ರದೇಶದ ಚಾಲಕ ಬಿಲಾಲ್ ಅಹ್ಮದ್ ವಾಗೆ, ಆತನ ಸಹಾಯಕ ಇಶ್ಫಾಕ್ ಚೋಪಾನ್ ಹಾಗೂ ಉಗ್ರರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಮಾಡಿಕೊಟ್ಟಿದ್ದ ತ್ರಾಲ್‌ನ ನಿವಾಸಿ ಶಫಿಕ್ ಅಹ್ಮದ್ ಶೇಖ್ ಎಂಬಾತನನ್ನು ಬಂಧಿಸಲಾಗಿದೆ. ವಿಚಾರಣೆಗಾಗಿ ಮನೆ ಮಾಲೀಕರನ್ನೂ ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಮೂವರನ್ನು ಸೋಮವಾರ ಇಲ್ಲಿನ ಎನ್‌ಐಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಏಪ್ರಿಲ್ 22ರಂದು ಅರೆಸೇನಾ ಪಡೆಯನ್ನು ಕರೆದೊಯ್ಯುತ್ತಿದ್ದ ಬಸ್‌ನ ಮೇಲೆ ಜೈಶೆ–ಮೊಹಮ್ಮದ್ (ಜೆಇಎಂ)ನ ಇಬ್ಬರು ಆತ್ಮಾಹುತಿ ದಾಳಿಕೋರರು ನಡೆಸಿದ ದಾಳಿಯಲ್ಲಿ ಇಬ್ಬರು ದಾಳಿಕೋರರು ಹಾಗೂ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಎಎಸ್‌ಐಯೊಬ್ಬರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.