ಕೌಶಂಬಿ: ಕೌಶಂಬಿ ಜಿಲ್ಲೆಯಲ್ಲಿ 21 ವರ್ಷದ ಯುವತಿಯ 'ಕಾನೂನುಬಾಹಿರ ಮತಾಂತರದ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಈ ಪೈಕಿ ಯುವತಿಯು ಕಳೆದ ವರ್ಷ ಒಬ್ಬ ಆರೋಪಿಯೊಂದಿಗೆ ಪರಾರಿಯಾಗಿದ್ದರು ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮದುವೆಗೂ ಒಂದು ದಿನ ಮೊದಲು ಯುವತಿ ತನ್ನ ಪ್ರಿಯಕರ ಮೊಹಮ್ಮದ್ ಅಹ್ಸಾನ್ ಅಲಿಯಾಸ್ ಹಸನ್ ಜೊತೆ ಪರಾರಿಯಾಗಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಧೇಶ್ಯಾಮ್ ವಿಶ್ವಕರ್ಮ ತಿಳಿಸಿದ್ದಾರೆ.
ಇದಾದ ಬಳಿಕ ಯುವತಿಯ ಅಣ್ಣ ಪೊಲೀಸರಿಗೆ ದೂರು ನೀಡಿದ್ದು, ಐಪಿಸಿ ಸೆಕ್ಷನ್ ಮತ್ತು ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ಕಾಯ್ದೆಯ ಸಂಬಂಧಿತ ಪ್ರಕರಣಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಸನ್, ಮುಸ್ತಫಾ ಮತ್ತು ಅತೀಕ್ ಅವರನ್ನು ಬಂಧಿಸಲಾಗಿದೆ ಮತ್ತು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಹಸನ್ ಜೊತೆ ಆಕೆಯು ಸ್ವಇಚ್ಛೆಯಿಂದ ಪರಾರಿಯಾಗಿದ್ದರು. ಅವರು ಆರು ತಿಂಗಳು ಒಟ್ಟಿಗೆ ಇದ್ದರು ಎಂದು ವಿಶೇಷ ಕಾರ್ಯಾಚರಣೆ ಗುಂಪಿನ ಉಸ್ತುವಾರಿ ಸಂಜಯ್ ಗುಪ್ತಾ ತಿಳಿಸಿದ್ದಾರೆ.
ಆಕೆಯು ತನ್ನ ಸೋದರನನ್ನು ಮದುವೆಯಾಗಲು ಬಯಸಿದರೆ ಆಕೆ ತನ್ನ ಧರ್ಮವನ್ನು ಬದಲಾಯಿಸಬೇಕಾಗುತ್ತದೆ ಎಂದು ಹಸನ್ ಸಹೋದರ ಮುಸ್ತಫಾ ಹೇಳಿದ್ದಾಗಿ ಗುಪ್ತಾ ತಿಳಿಸಿದ್ದಾರೆ.
ಆದರೆ ಧಾರ್ಮಿಕ ಮತಾಂತರದ ನಂತರ, ಯುವತಿಯು ಪ್ರತಾಪಗಡ ಜಿಲ್ಲೆಯ ನಿವಾಸಿ ಗುಲಾಂ ಗೌಸ್ (25) ರನ್ನು ಮದುವೆಯಾಗಿದ್ದಾರೆ. ಸದ್ಯ ಗೌಸ್‌ನನ್ನು ಬಂಧಿಸಲಾಗಿದೆ ಮತ್ತು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಗೌಸ್ 2014 ರಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರು ಮತ್ತು ಮುಸ್ಲಿಮರಾಗುವ ಮೊದಲು ಅವರು ರತಿಭಾನ್ ಪಾಸಿಯಾಗಿದ್ದರು. ಗೌಸ್‌ನಿಂದ ಆರು ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುಪ್ತಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.