ADVERTISEMENT

ಉತ್ತರ ಪ್ರದೇಶ:‌ ಎನ್‌ಕೌಂಟರ್‌ನಲ್ಲಿ ಮೂವರು ಖಾಲಿಸ್ತಾನಿ ಭಯೋತ್ಪಾದಕರ ಹತ್ಯೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2024, 6:11 IST
Last Updated 23 ಡಿಸೆಂಬರ್ 2024, 6:11 IST
ಎನ್‌ಕೌಂಟರ್‌–ಸಾಂದರ್ಭಿಕ ಚಿತ್ರ
ಎನ್‌ಕೌಂಟರ್‌–ಸಾಂದರ್ಭಿಕ ಚಿತ್ರ   

ಪಿಲಿಭಿತ್/ ಚಂಡೀಗಢ: ಗುರುದಾಸಪುರದಲ್ಲಿ ನಡೆದ ಗ್ರೆನೇಡ್ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮೂವರು ಶಂಕಿತ ಖಾಲಿಸ್ತಾನಿ ಉಗ್ರರು ಪಿಲಿಭಿತ್‌ನಲ್ಲಿ ಪೊಲೀಸರೊಂದಿಗಿನ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾರೆ.

ಪಿಲಿಭಿತ್‌ನ ಪೂರನ್‌ಪುರ ಪ್ರದೇಶದಲ್ಲಿ ಸೋಮವಾರ ಮುಂಜಾನೆ ಉತ್ತರ ಪ್ರದೇಶ ಮತ್ತು ಪಂಜಾಬ್‌ ಪೊಲೀಸರ ಜಂಟಿ ತಂಡ ಹಾಗೂ ‘ಖಾಲಿಸ್ತಾನಿ ಜಿಂದಾಬಾದ್‌ ಫೋರ್ಸ್‌’ (ಕೆಝಡ್‌ಎಫ್‌) ಸಂಘಟನೆಗೆ ಸೇರಿದ ಉಗ್ರರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ.

ಹತ್ಯೆಯಾದ ಶಂಕಿತ ಉಗ್ರರನ್ನು ವರಿಂದರ್‌ ಸಿಂಗ್‌ ಅಲಿಯಾಸ್ ರವಿ (23), ಗುರ್ವಿಂದರ್‌ ಸಿಂಗ್ (25) ಮತ್ತು ಜಶನ್‌ಪ್ರೀತ್‌ ಸಿಂಗ್‌ ಅಲಿಯಾಸ್ ಪ್ರತಾಪ್‌ ಸಿಂಗ್ (18) ಎಂದು ಗುರುತಿಸಿರುವುದಾಗಿ ಪಂಜಾಬ್‌ ಪೊಲೀಸ್‌ ಮಹಾನಿರ್ದೇಶಕ ಗೌರವ್‌ ಯಾದವ್‌ ತಿಳಿಸಿದ್ದಾರೆ.

ADVERTISEMENT

‘ಈ ಕಾರ್ಯಾಚರಣೆಯು ಪಾಕಿಸ್ತಾನಿ ಪ್ರಾಯೋಜಿತ ಕೆಝಡ್‌ಎಫ್‌ ವಿರುದ್ಧದ ಹೋರಾಟದಲ್ಲಿ ದೊರೆತ ಬಲುದೊಡ್ಡ ಯಶಸ್ಸು’ ಎಂದು ಅವರು ಹೇಳಿದ್ದಾರೆ.

ಎನ್‌ಕೌಂಟರ್‌ನಲ್ಲಿ ಬಲಿಯಾದ ಮೂವರೂ ಪಂಜಾಬ್‌ನ ಗುರುದಾಸಪುರ ಜಿಲ್ಲೆಯ ಕಲಾನೌರ್‌ ಪ್ರದೇಶದ ನಿವಾಸಿಗಳು. ಕಲಾನೌರ್‌ನ ಬಕ್ಷೀವಾಲಾ ಪೊಲೀಸ್‌ ಠಾಣೆಯ ಮೇಲೆ ಗ್ರೆನೇಡ್‌ ದಾಳಿ ನಡೆಸಿದ ಆರೋಪ ಇವರ ಮೇಲಿದೆ. ಈಚೆಗೆ ನಡೆದ ಗ್ರೆನೇಡ್‌ ದಾಳಿ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.

‘ಗುಂಡಿನ ಚಕಮಕಿಯಲ್ಲಿ ತೀವ್ರವಾಗಿ ಗಾಯಗೊಂಡ ಮೂವರನ್ನು ಪೂರನ್‌ಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು’ ಎಂದು ಉತ್ತರ ಪ್ರದೇಶದ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಭ್‌ ಯಶ್‌ ತಿಳಿಸಿದ್ದಾರೆ.

ತಲಾ ಎರಡು ಎಕೆ–47 ರೈಫಲ್ ಮತ್ತು ಪಿಸ್ತೂಲ್‌ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

‘ಕೆಝಡ್‌ಎಫ್‌ ಸಂಘಟನೆಯ ಇಡೀ ಜಾಲವನ್ನು ಭೇದಿಸಲು ಮತ್ತು ಹತ್ಯೆಯಾದ ಉಗ್ರರ ಜತೆ ಸಂಪರ್ಕ ಹೊಂದಿರುವವರ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದ್ದಾರೆ.

ಪಂಜಾಬ್‌ನ ವಿವಿಧೆಡೆ ಈ ತಿಂಗಳು ಮೂರು ಕಡೆ ಬಾಂಬ್‌ ಸ್ಫೋಟ ಘಟನೆ ನಡೆದಿದ್ದು, ಅದರ ಹೊಣೆಯನ್ನು ಕೆಝಡ್‌ಎಫ್‌ ಸಂಘಟನೆ ಹೊತ್ತುಕೊಂಡಿದೆ.

‘ಖಾಲಿಸ್ತಾನಿ ಜಿಂದಾಬಾದ್‌ ಫೋರ್ಸ್‌’ಗೆ ಸೇರಿದ ಉಗ್ರರು ಪಿಲಿಭಿತ್‌ನ ಪೂರನ್‌ಪುರ ಪ್ರದೇಶದಲ್ಲಿ ಎನ್‌ಕೌಂಟರ್ ಸೋಮವಾರ ಮುಂಜಾನೆ ನಡೆದ ಗುಂಡಿನ ಚಕಮಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.