ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಅರಣ್ಯ ಪ್ರದೇಶದೊಳಗೆ ಭಾನುವಾರ ಸೇನೆ ಮತ್ತು ಪೊಲೀಸರು ನಡೆಸಿದ ಜಂಟಿ ಶೋಧ ಕಾರ್ಯಾಚರಣೆ ವೇಳೆ ಉಗ್ರರೊಂದಿಗೆ ನಡೆದ ಗುಂಡಿನ ದಾಳಿಯಲ್ಲಿ ಪಾಕಿಸ್ತಾನದ ಬಂಧಿತ ಉಗ್ರನೊಬ್ಬ ಹತ್ಯೆಗೀಡಾಗಿದ್ದು, ಭದ್ರತಾ ಪಡೆಯ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ.
‘ಕಾರ್ಯಾಚರಣೆ ವೇಳೆ ಉಗ್ರರ ಅಡಗುತಾಣ ಪತ್ತೆ ಹಚ್ಚಲು ಪಾಕಿಸ್ತಾನದ ಬಂಧಿತ ಭಯೋತ್ಪಾದಕ, ಎಲ್‌ಇಟಿಯ ಜೊತೆ ನಂಟು ಹೊಂದಿರುವ ಜಿಯಾ ಮುಸ್ತಫಾನನ್ನು ಜತೆಗೆ ಕರೆದೊಯ್ಯಲಾಗಿತ್ತು. ಅದೇ ವೇಳೆ ಉಗ್ರರು ಹಾರಿಸಿದ ಗುಂಡಿಗೆ ಆತ ಗಾಯಗೊಂಡಿದ್ದ. ಭಾರಿ ಬೆಂಕಿಯ ಕಾರಣ ಆತನನ್ನು ಸ್ಥಳದಿಂದ ಹೊರ ತೆಗೆಯಲಾಗಲಿಲ್ಲ. ನಂತರ ಆತನ ಮೃತದೇಹವನ್ನು ಹೊರ ತೆಗೆಯಲಾಯಿತು. ದಾಳಿಯಲ್ಲಿ ಭದ್ರತಾ ಪಡೆಯು ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ’ ಎಂದು ಪೊಲೀಸ್ ವಕ್ತಾರರು ಮಾಹಿತಿ ನೀಡಿದ್ದಾರೆ.
‘ಅ.14ರಂದು ಮೂವರು ಸೇನಾ ಯೋಧರು ಉಗ್ರರ ದಾಳಿಗೆ ಬಲಿಯಾಗಿದ್ದರು. ಈ ಉಗ್ರರು ಮೆಂಧರ್‌ನ ಭಾಟದುರಿಯಾನ್ ಅರಣ್ಯದಲ್ಲಿ ಅಡಗಿರಬಹುದೆಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು’ ಎಂದು ಅವರು ತಿಳಿಸಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾವಲಕೋಟೆಯ ನಿವಾಸಿ ಮುಸ್ತಫಾ 14 ವರ್ಷಗಳಿಂದ ಕೋಟ್ ಭಾಲ್ವಾಲ್ ಜೈಲಿನಲ್ಲಿದ್ದ. ಅ. 14ರಂದು ಸೇನಾ ಯೋಧರ ಮೇಲೆ ನಡೆದ ದಾಳಿಯ ಕುರಿತು ತನಿಖೆ ನಡೆಸಿದಾಗ, ಉಗ್ರರೊಂದಿಗೆ ಮುಸ್ತಫಾ ಸಂಬಂಧ ಹೊಂದಿದ್ದ ವಿಷಯವನ್ನು ಬಹಿರಂಗವಾಗಿತ್ತು. ನಂತರ ಆತನನ್ನು ಮೆಂಧರ್‌ನ ಪೊಲೀಸ್ ವಶಕ್ಕೆ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.