ADVERTISEMENT

ಕಾಶ್ಮೀರದಲ್ಲಿ 3 ಪ್ರತ್ಯೇಕ ಎನ್‌ಕೌಂಟರ್‌: ಜೆಇಎಂ ಕಮಾಂಡರ್‌ ಸೇರಿ ನಾಲ್ವರ ಹತ್ಯೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2022, 11:07 IST
Last Updated 12 ಮಾರ್ಚ್ 2022, 11:07 IST
ಶ್ರೀನಗರದಲ್ಲಿ ಎನ್‌ಕೌಂಟರ್: ಪಿಟಿಐ ಚಿತ್ರ
ಶ್ರೀನಗರದಲ್ಲಿ ಎನ್‌ಕೌಂಟರ್: ಪಿಟಿಐ ಚಿತ್ರ   

ಶ್ರೀನಗರ: ಕಾಶ್ಮೀರ ಕಣಿವೆಯ ವಿವಿಧೆಡೆ ಶನಿವಾರ ಭದ್ರತಾಪಡೆಗಳು ನಡೆಸಿದ ಪ್ರತ್ಯೇಕ ಮೂರು ಎನ್‌ಕೌಂಟರ್‌ಗಳಲ್ಲಿ ಜೈಶೆ–ಮೊಹಮ್ಮದ್‌ (ಜೆಇಎಂ) ಪಾಕಿಸ್ತಾನದ ಕಮಾಂಡರ್‌ ಸೇರಿ ನಾಲ್ವರು ಉಗ್ರರು ಹತರಾಗಿದ್ದು, ಒಬ್ಬನನ್ನು ಸೆರೆಹಿಡಿಯಲಾಗಿದೆ.

‘ಕಾಶ್ಮೀರದ ಪುಲ್ವಾಮ, ಗಂದರ್‌ಬಲ್‌ ಹಾಗೂ ಕುಪ್ವಾರ ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ ಭದ್ರತಾಪಡೆಗಳು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನಡೆಸಿದ್ದು, ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಚೆವಾಕ್ಲನ್‌ ಪ್ರದೇಶದಲ್ಲಿ ಜೆಇಎಂ ಕಮಾಂಡರ್‌ ಕಮಾಲ್‌ ಭಾಯ್‌ ಸೇರಿ ಇಬ್ಬರು ಜೆಇಎಂ ಉಗ್ರರನ್ನು ಹತ್ಯೆ ಮಾಡಲಾಗಿದೆ’ ಎಂದು ಕಾಶ್ಮೀರ ವಲಯ ಐಜಿಪಿ ವಿಜಯಕುಮಾರ್‌ ತಿಳಿಸಿದರು.

‘ಮಧ್ಯ ಕಾಶ್ಮೀರದ ಗಂದರಬಲ್‌ ಜಿಲ್ಲೆಯ ಸೆರ್ಚ್‌ ಪ್ರದೇಶ ಹಾಗೂ ಉತ್ತರ ಕಾಶ್ಮೀರದ ಹಂದ್ವಾರದ ನೆಚಮ–ರಾಜ್ವಾರ್‌ನಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಎಲ್‌ಇಟಿಯ ಇಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ’ ಎಂದು ಅವರು ಹೇಳಿದರು.

ADVERTISEMENT

‘ಹತ್ಯೆಯಾದ ಜೆಇಎಂ ಕಮಾಂಡರ್‌ ಕಮಾಲ್‌ ಭಾಯ್‌ ಅಲಿಯಾಸ್‌ ಜಟ್ಟ್ 2018ರಿಂದ ಪುಲ್ವಾಮ, ಶೋಪಿಯಾನ್‌ ಜಿಲ್ಲೆಗಳಲ್ಲಿ ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ. ಅಲ್ಲದೇ ಹಲವು ಭಯೋತ್ಪಾದಕ ಅಪರಾಧ ಹಾಗೂ ನಾಗರಿಕ ದೌರ್ಜನ್ಯಗಳಲ್ಲಿ ಭಾಗಿಯಾಗಿದ್ದ. ಎನ್‌ಕೌಂಟರ್‌ ವೇಳೆ ಉಗ್ರನೊಬ್ಬ ಸಿಕ್ಕಿಬಿದ್ದಿದ್ದು, ಆತನನ್ನು ಬಂಧಿಸಲಾಗಿದೆ’ ಎಂದು ಕಾಶ್ಮೀರ ವಲಯ ಐಜಿಪಿ ವಿಜಯಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.