ADVERTISEMENT

ಮಗು ಅತ್ತಿದ್ದಕ್ಕೆ ಭಾರತೀಯ ಕುಟುಂಬವನ್ನು ವಿಮಾನದಿಂದ ಇಳಿಸಿದ ಬ್ರಿಟಿಷ್ ಏರ್‌ವೇಸ್

ಏಜೆನ್ಸೀಸ್
Published 9 ಆಗಸ್ಟ್ 2018, 11:17 IST
Last Updated 9 ಆಗಸ್ಟ್ 2018, 11:17 IST
   

ನವದೆಹಲಿ:ಲಂಡನ್‌ನಿಂದ ಬರ್ಲಿನ್‌ನತ್ತ ಪ್ರಯಾಣಿಸುವ ವೇಳೆ ಮಗು ಅಳುತ್ತಿದ್ದ ಕಾರಣ ದೇಶದ ಐಇಎಸ್‌ ಅಧಿಕಾರಿಯೊಬ್ಬರ ಕುಟುಂಬವನ್ನು ಬ್ರಿಟಿಷ್ ಏರ್‌ವೇಸ್‌ ವಿಮಾನದಿಂದ ಬಲವಂತವಾಗಿ ಇಳಿಸಲಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಗಿರುವ1984ರ ಬ್ಯಾಚ್‌ನ ಐಇಎಸ್‌ ಅಧಿಕಾರಿ ಎಪಿ ಪಾಠಕ್‌ ಅವರ ಕುಟುಂಬವನ್ನು ಜುಲೈ 23ರಂದು ವಿಮಾನದಿಂದ ಕೆಳಗಿಳಿಸಲಾಗಿತ್ತು.

‘ವಿಮಾನ ಪ್ರಯಾಣ ಆರಂಭವಾಗುವ ಮುನ್ನ ನಮ್ಮ ಮೂರು ವರ್ಷದ ಮಗು ಅಳಲು ಆರಂಭಿಸಿತು. ಆ ವೇಳೆ ನಮ್ಮತ್ತ ಬಂದ ಸಿಬ್ಬಂದಿ ಮಗುವನ್ನು ಸುಮ್ಮನಿರಿಸುವಂತೆ ಸೂಚಿಸಿದರು. ಅಳು ನಿಲ್ಲಿಸದಿದ್ದರೆ ವಿಮಾನದಿಂದ ಇಳಿಸುವುದಾಗಿ ಬೆದರಿಕೆ ಹಾಕಿದರು. ನಂತರ ಕಾವಲುಗಾರರನ್ನು ಕರೆದುನಮ್ಮನ್ನು ಬಲವಂತವಾಗಿ ಕೆಳಗಿಳಿಸಲಾಯಿತು’ ಎಂದು ಪಾಠಕ್‌ ಹೇಳಿದ್ದಾರೆ.

ADVERTISEMENT

ಜನಾಂಗೀಯ ದೌರ್ಜನ್ಯಕ್ಕೆ ಸಂಬಂಧಿಸಿದಂತೆವಿಮಾನಯಾನ ಸಂಸ್ಥೆಯ ವಿರುದ್ಧ ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು ಅವರಿಗೆ ದೂರು ನೀಡಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಪತ್ರ ಬರೆದು ಬ್ರಿಟಿಷ್‌ ಏರ್‌ವೇಸ್‌ ವಿರುದ್ಧ ದೂರು ನೀಡಿದ್ದೇನೆ. ಇದು ಜನಾಂಗೀಯ ನಿಂದನೆಯಾಗಿದ್ದು, ಪರಿಹಾರ ನೀಡುವಂತೆ ಹಾಗೂ ಕ್ಷಮೆಯಾಚಿಸುವಂತೆ ಕೋರಿದ್ದೇನೆ’ ಎಂದಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ವಿಮಾನಯಾನ ಸಂಸ್ಥೆ ಪ್ರತಿಕ್ರಿಯಿಸಿದೆ.

‘ಇಂತಹ ದೂರುಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಯಾವುದೇ ರೀತಿಯ ತಾರತಮ್ಯವನ್ನು ಸಹಿಸುವುದಿಲ್ಲ. ಈ ಕುರಿತು ಸದ್ಯ ತನಿಖೆ ಆರಂಭಿಸಿದ್ದು, ದೂರುದಾರರೊಡನೆ ನೇರ ಸಂಪರ್ಕದಲ್ಲಿದ್ದೇವೆ’ ಎಂದು ಸಂಸ್ಥೆಯ ವಕ್ತಾರ ಹೇಳಿದ್ದಾರೆ.

ತನಿಖೆಗೆ ಆದೇಶಿಸಿರುವುದಾಗಿ ಸುರೇಶ್‌ ಪ್ರಭು ಅವರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.