ADVERTISEMENT

ಮನ್‌ ಕಿ ಬಾತ್‌ 2.0: ನೀರುಳಿಸಿ, ನೀರುಳಿಸಿದವರ ಕಥೆ ಹೇಳಿ ಎಂದ ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 6:20 IST
Last Updated 30 ಜೂನ್ 2019, 6:20 IST
   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬಹುನಿರೀಕ್ಷಿತ ‘ಮನ್‌ ಕಿ ಬಾತ್‌’ನ (ಮನದ ಮಾತು) ಎರಡನೇ ಆವೃತ್ತಿ ಭಾನುವಾರ ಬೆಳಿಗ್ಗೆ 11 ಗಂಟೆಗೆ ಆರಂಭವಾಯಿತು. ಜಲಸಂರಕ್ಷಣೆಯ ಅಗತ್ಯ ಮತ್ತು ಅನಿವಾರ್ಯತೆಯನ್ನು ಒತ್ತಿ ಹೇಳಿದ ನರೇಂದ್ರ ಮೋದಿ,ನೀರುಳಿಸಿ, ನೀರು ಉಳಿಸುವ ಮಾರ್ಗ ತಿಳಿಸಿ, ನೀರು ಉಳಿಸಿದವರ ಕಥೆಗಳನ್ನು ಹಂಚಿಕೊಳ್ಳಿ ಎಂದುಮೂರು ವಿನಂತಿಗಳನ್ನು ಹಂಚಿಕೊಂಡರು.

ಕಳೆದ ಫೆಬ್ರುವರಿಯಲ್ಲಿ ನಡೆದ ಮೊದಲಆವೃತ್ತಿಯ ಕೊನೆಯ ‘ಮನದ ಮಾತು’ ಮತ್ತು ಇಂದು ಆರಂಭವಾದ ಎರಡನೇ ಆವೃತ್ತಿಯ ಮೊದಲ ‘ಮನದ ಮಾತು’ ನಡುವಣ ಕಾಲಘಟ್ಟದಲ್ಲಿ ಆದ ಬೆಳವಣಿಗೆಗಳನ್ನು ವಿವರಿಸುವ ಮೂಲಕ ಮೋದಿ ಮಾತು ಆರಂಭಿಸಿದರು.

‘ಚುನಾವಣೆ ಮುಗಿದ ತಕ್ಷಣ ನಿಮ್ಮೊಡನೆ ಮಾತನಾಡಬೇಕು ಅಂತ ನನಗೆ ಅನ್ನಿಸ್ತಿತ್ತು. ಆದರೆ ಪ್ರತಿತಿಂಗಳ ಕೊನೆಯ ಭಾನುವಾರವೇ ‘ಮನದ ಮಾತು’ ಎಂದು ನಿಗದಿಯಾಗಿತ್ತಲ್ವಾ? ಹೀಗಾಗಿ ಆ ರೂಢಿ ತಪ್ಪುವುದು ಬೇಡ ಎಂದು ನನ್ನನ್ನು ನಾನು ನಿಯಂತ್ರಿಸಿಕೊಂಡೆ. ಈ ಭಾನುವಾರಕ್ಕಾಗಿ ನಾನು ಕಾತರದಿಂದ ಕಾಯುತ್ತಿದ್ದೆ’ ಎಂದು ಮೋದಿ ಹೇಳಿದರು.

ADVERTISEMENT

ಮೋದಿ ಹಂಚಿಕೊಂಡ ಮನದ ಮಾತುಗಳ ಕನ್ನಡ ಅನುವಾದ ಇಲ್ಲಿದೆ...

ಕೇದಾರನಾಥ್ ಭೇಟಿ:‘ಚುನಾವಣೆಯ ಒತ್ತಡವಿದ್ದರೂ ನೀವೇಕೆ ಕೇದಾರನಾಥ್‌ಗೆ ಹೋಗಿದ್ದಿರಿ’ ಎಂದು ಹಲವರು ನನ್ನನ್ನು ಪ್ರಶ್ನಿಸಿದ್ದರು. ಇಂಥ ಪ್ರಶ್ನೆಗಳಿಗೆ ನನ್ನ ಉತ್ತರ ಒಂದೇ, ‘ನನ್ನನ್ನು ನಾನು ಕಂಡುಕೊಳ್ಳಬೇಕಿತ್ತು’.

ತುರ್ತುಸ್ಥಿತಿಗೆ ಜನರ ಪ್ರಜ್ಞೆಯಲ್ಲಿ ಪ್ರತಿರೋಧವಿತ್ತು:ದೇಶದ ಮೇಲೆ ತುರ್ತುಸ್ಥಿತಿ ಹೇರಿದಾಗ ಕೇವಲ ರಾಜಕಾರಿಣಿಗಳು ಮಾತ್ರ ಪ್ರತಿರೋಧಿಸಲಿಲ್ಲ. ಹೋರಾಟಗಳು ಕೇವಲ ಸೆರೆವಾಸಕ್ಕೆ ಮುಗಿಯಲಿಲ್ಲ. ದೇಶದ ಪ್ರಜ್ಞೆಯಲ್ಲಿಯೇ ತುರ್ತುಸ್ಥಿತಿಗೆ ಪ್ರತಿರೋಧ ಮನೆಮಾಡಿತ್ತು.

ಲೋಕಸಭೆ ಸಾಧನೆ: ‘ನಮ್ಮ ದೇಶವು ಈಚೆಗಷ್ಟೇ ಪ್ರಜಾತಂತ್ರದ ದೊಡ್ಡ ಹಬ್ಬವನ್ನು ಆಚರಿಸಿತು. ಬೃಹದಾಕಾರದ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿದೆ. ಎಲ್ಲ ಜಾತಿ ಮತ್ತು ವರ್ಗದ ಜನರು ದೇಶದ ಭವಿಷ್ಯವನ್ನು ನಿರ್ಧರಿಸುವ ಈ ಹಬ್ಬದಲ್ಲಿ ಸಂಭ್ರಮದಿಂದ ಪಾಲ್ಗೊಂಡರು. 2019ರ ಲೋಕಸಭಾ ಚುನಾವಣೆಯಲ್ಲಿ ದೇಶದ 61 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ವಿಶ್ವದಲ್ಲಿ ಈವರೆಗೆ ಎಲ್ಲಿಯೂ ಇಷ್ಟುದೊಡ್ಡ ಚುನಾವಣೆ ನಡೆದಿರಲಿಲ್ಲ.

ಪ್ರೇಮಚಂದ್‌ ಕಥೆಗಳು: ‘ಈಚೆಗಷ್ಟೇ ನನಗೆ ಯಾರೋ ಒಬ್ಬರು ‘ಪ್ರೇಮಚಂದ್ ಅವರ ಜನಪ್ರಿಯ ಕಥೆಗಳು’ ಪುಸ್ತಕ ಕೊಟ್ಟಿದ್ದರು. ಅದನ್ನು ಓದುವುದು ಅದ್ಭುತ ಅನುಭವ’. (ಈ ಹಿಂದೆಯೂ ಮೋದಿ ತಾವು ಓದಿದ ಪುಸ್ತಕಗಳ ಬಗ್ಗೆ ಮನ್‌ ಕಿ ಬಾತ್‌ನಲ್ಲಿ ಮಾತನಾಡಿದ್ದರು.

ಪ್ರತಿ ಹನಿ ನೀರನ್ನೂ ಉಳಿಸೋಣ:‘ನೀರು ಉಳಿಸಲು ಇಂಥದ್ದೇ ನಿರ್ದಿಷ್ಟ ಸೂತ್ರ ಅಥವಾ ಮಾರ್ಗ ಇಲ್ಲ. ದೇಶದ ಬೇರೆಬೇರೆ ಕಡೆ ಬೇರೆಬೇರೆ ರೀತಿಯಲ್ಲಿ ನೀರು ಉಳಿಸುವ ಕೆಲಸ ನಡೆಯುತ್ತಿದೆ. ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ನೀರು ಉಳಿಸುವ ವ್ಯವಸ್ಥೆ ರೂಪುಗೊಳ್ಳಬೇಕು. ಆದರೆ ಪ್ರತಿ ಹನಿ ನೀರನ್ನೂ ಉಳಿಸುವುದು ನಮ್ಮ ಧ್ಯೇಯವಾಗಬೇಕು’.

ಜಲ ಸಂರಕ್ಷಣೆಯ ಕಥೆ ಹಂಚಿಕೊಳ್ಳಿ: ‘ನೀರು ಉಳಿಸಲು ದೇಶದಲ್ಲಿ ಸ್ವಚ್ಛ ಭಾರತ್ ಮಾದರಿಯ ದೊಡ್ಡ ಚಳವಳಿಯೇ ಆಗಬೇಕಿದೆ. ಸಮಾಜದಲ್ಲಿರುವ ಪ್ರಭಾವಿಗಳು ಎಲ್ಲರಿಗೂಜಲ ಸಂರಕ್ಷಣೆಯ ಅಗತ್ಯವನ್ನು ಮನವರಿಕೆ ಮಾಡಿಕೊಡಬೇಕು. ಜಲಸಂರಕ್ಷಣೆಯ ಸಾಂಪ್ರದಾಯಿಕ ಜ್ಞಾನವನ್ನು ಹಂಚಿಕೊಳ್ಳಿ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಜಲಸಂರಕ್ಷಣೆಗಾಗಿ ಕೆಲಸ ಮಾಡುತ್ತಿದ್ದಲ್ಲಿ ಅದರ ಬಗ್ಗೆಯೂ ಮಾಹಿತಿ ಕೊಡಿ’.

ನರೇಂದ್ರ ಮೋದಿ (ಕಲೆ: ಗುರು ನಾವಳ್ಳಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.