ADVERTISEMENT

ವಾಸಸ್ಥಾನ ಅರಸಿ 450 ಕಿ.ಮೀ.ಸಂಚಾರ: ದಶಕದ ಅವಧಿಯಲ್ಲೇ ವ್ಯಾಘ್ರವೊಂದರ ಸುದೀರ್ಘ ಪಯಣ

ಪಿಟಿಐ
Published 7 ಸೆಪ್ಟೆಂಬರ್ 2025, 16:24 IST
Last Updated 7 ಸೆಪ್ಟೆಂಬರ್ 2025, 16:24 IST
   

ಛತ್ರಪತಿ ಸಂಭಾಜಿನಗರ: ಮೂರು ವರ್ಷ ಪ್ರಾಯದ ಗಂಡು ಹುಲಿಯೊಂದು ವಾಸಸ್ಥಾನ ಅರಸಿ 450 ಕಿ.ಮೀ. ಸಂಚರಿಸಿದೆ. ದಶಕದ ಅವಧಿಯಲ್ಲೇ ಇದು ವ್ಯಾಘ್ರವೊಂದರ ಮೊದಲ ಸುದೀರ್ಘ ಪಯಣವಾಗಿದೆ.

ವಿದರ್ಭ ಪ್ರಾಂತ್ಯದ ತಿಪ್ಪೇಶ್ವರ ಅಭಯಾರಣ್ಯದಿಂದ ಸಂಚಾರ ಆರಂಭಿಸಿದ ಹುಲಿಯು ನೆರೆಯ ತೆಲಂಗಾಣದ ಆದಿಲಾಬಾದ್‌ನಲ್ಲೂ ಅಲೆದಾಡಿದ್ದು, ಮತ್ತೆ ಮಹಾರಾಷ್ಟ್ರಕ್ಕೆ ಮರಳಿ ನಾಂದೇಡ್‌, ಅಹಮದ್‌ಪುರ ಮೂಲಕ ಧಾರಾಶಿವ್‌ ಜಿಲ್ಲೆಯ ಯೆದಶಿ ರಾಮಲಿಂಗ್‌ ಘಾಟ್‌ ವನ್ಯಜೀವಿ ಅಭಯಾರಣ್ಯದಲ್ಲಿ ತನ್ನ ನೆಲೆ ಕಂಡುಕೊಂಡಿದೆ.

22.50 ಚದರ ಕಿ.ಮೀ.ನಲ್ಲಿ ಹರಡಿಕೊಂಡಿರುವ ಯೆದಶಿ ರಾಮಲಿಂಗ್ ಘಾಟ್‌ನ್ನು 1997ರಲ್ಲಿ ಅಭಯಾರಣ್ಯವಾಗಿ ಗುರುತಿಸಲಾಗಿದೆ. ಇದು ಚಿರತೆ, ಕರಡಿ, ಜಿಂಕೆ, ನರಿ, ತೋಳ, ಹಲ್ಲಿ, ಮೊಲಗಳ ಆವಾಸಸ್ಥಾನವಾಗಿದೆ ಎಂದು ವಲಯ ಅರಣ್ಯಾಧಿಕಾರಿ ಅಮೋಲ್ ಮುಂಡೆ ತಿಳಿಸಿದ್ದಾರೆ.

ADVERTISEMENT

ಯೆದಶಿಯಲ್ಲಿ ಕಂಡುಬಂದಿರುವ ಹುಲಿಯನ್ನು ಅರಣ್ಯ ಸಿಬ್ಬಂದಿಯು ‘ರಾಮಲಿಂಗ್‌’ ಹೆಸರಿನಿಂದಲೇ ಕರೆಯುತ್ತಿದ್ದಾರೆ. ಇಲ್ಲಿಯೇ ಶಿವನ ದೇಗುಲವೊಂದು ಇದೆ.

ಕಳೆದ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ರಾಮಲಿಂಗ್‌ ಘಾಟ್‌ನಲ್ಲಿ ಹುಲಿಯನ್ನು ನೋಡಲಾಯಿತು. ವನ್ಯಜೀವಿ ತಜ್ಞರು ಇದರ ಬಗ್ಗೆ ಸಮಗ್ರ ಅಧ್ಯಯನ ನಡೆಸಿದಾಗ, ಇದು ಯವತ್ಮಾಲ್‌ ಜಿಲ್ಲೆಯ ತಿಪ್ಪೇಶ್ವರ ವನ್ಯಜೀವಿ ಅಭಯಾರಣ್ಯದಿಂದ ಇಲ್ಲಿಗೆ ಬಂದಿದೆ ಎಂದು ತೀರ್ಮಾನಿಸಿದ್ದಾರೆ.

ಯೆದಶಿಯಲ್ಲಿ ತೆಗೆದ ಕ್ಯಾಮೆರಾ ಟ್ರ್ಯಾಪ್‌ ಚಿತ್ರಗಳನ್ನು, ತಿಪ್ಪೇಶ್ವರದಲ್ಲಿನ ಹಿಂದಿನ ಛಾಯಾಚಿತ್ರಗಳೊಂದಿಗೆ ಹೋಲಿಸಲಾಗಿದ್ದು, ಈ ಎರಡೂ ಕಡೆಯ ಚಿತ್ರಗಳಲ್ಲಿರುವುದು ಒಂದೇ ಹುಲಿ ಎಂಬುದು ದೃಢಪಟ್ಟಿದೆ.

ನಾಲ್ಕನೇ ಒಂದು ಭಾಗ:

ರಾಮಲಿಂಗ್‌ ಅಭಯಾರಣ್ಯದ ವ್ಯಾಪ್ತಿಯು ಚಿಕ್ಕದು. ಹುಲಿಯ ವಾಸಸ್ಥಾನಕ್ಕೆ ಅವಶ್ಯವಿರುವ ನಾಲ್ಕನೇ ಒಂದು ಭಾಗದಷ್ಟಿದೆ. ಆದ್ದರಿಂದ ಪಕ್ಕದ ಬಾರ್ಶಿ, ಭುಮ್, ತುಳಜಾಪುರ, ಧಾರಾಶಿವ್‌ ತಾಲ್ಲೂಕಿನಲ್ಲೂ ಈ ಹುಲಿಯು ಸಂಚಾರ ನಡೆಸುತ್ತಿದೆ.

ರೇಡಿಯೊ ಕಾಲರ್‌ ಅಳವಡಿಸಲಿಕ್ಕಾಗಿ ಹಾಗೂ ಸಹ್ಯಾದ್ರಿ ಮೀಸಲು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲು ಈ ವರ್ಷದ ಜನವರಿಯಿಂದ ಏಪ್ರಿಲ್‌ ನಡುವಿನ ಅವಧಿಯಲ್ಲಿ 75 ದಿನ ಕಾರ್ಯಾಚರಣೆ ನಡೆಸಿದರೂ ಯಶಸ್ಸು ಸಿಕ್ಕಿಲ್ಲ. ಹುಲಿಯ ಪತ್ತೆಗಾಗಿ ಡ್ರೋನ್‌ ಬಳಸಿದರೂ ಕಂಡಿದ್ದು ಎರಡರಿಂದ ಮೂರು ಬಾರಿ ಮಾತ್ರ.

ಯೆದಶಿ ಅಭಯಾರಣ್ಯದಲ್ಲೇ ಕಾಡುಹಂದಿ, ಸಾಂಬಾರ್‌ ಜಿಂಕೆ, ನೀಲಗಾಯಿ, ಚಿಂಕಾರಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವುದರಿಂದ ಹುಲಿಗೆ ಬೇಟೆ ಸಮೃದ್ಧಿಯಾಗಿ ಸಿಗುತ್ತಿದೆ. ಮುಂಜಾವಿನಲ್ಲಿ ಅಪೂರ್ವಕ್ಕೊಮ್ಮೆ ಎಂಬಂತೆ ದರ್ಶನ ನೀಡುತ್ತದೆ ಎಂದು ಮುಂಡೆ ‘ರಾಮಲಿಂಗ್‌’ ಬಗ್ಗೆ ತಿಳಿಸಿದರು.

ಅಭಯಾರಣ್ಯದ ಹೊರಗೆ ಸಂಚರಿಸುತ್ತಿದ್ದರೂ ಮನುಷ್ಯರ ಮೇಲೆ ದಾಳಿ ನಡೆಸಿಲ್ಲ. ಆರಂಭದ ದಿನಗಳಲ್ಲಿ ಜಾನುವಾರುಗಳನ್ನು ಬೇಟೆಯಾಡಿತ್ತು
ಅಮೋಲ್ ಮುಂಡೆ ವಲಯ ಅರಣ್ಯಾಧಿಕಾರಿ
ಮರಾಠವಾಡದಲ್ಲಿ ನಾಲ್ಕನೇ ಹುಲಿ...
‘ರಾಮಲಿಂಗ್‌’ ಮರಾಠವಾಡದಲ್ಲಿ ಕಾಣಿಸಿಕೊಂಡ ನಾಲ್ಕನೇ ಹುಲಿ. ಗೌತಲಾ ವನ್ಯಜೀವಿ ಅಭಯಾರಣ್ಯದಲ್ಲಿ 1971ರಲ್ಲಿ ಕಾಣಿಸಿಕೊಂಡಿದ್ದ ಹುಲಿಯೇ ಪ್ರಥಮ ಹಾಗೂ ಕೊನೆಯದಾಗಿತ್ತು. 2020ರವರೆಗೂ ಇನ್ನೊಂದು ಹುಲಿ ಕಾಣಿಸಿಕೊಂಡಿರಲಿಲ್ಲ. ಮರಾಠವಾಡದ ನಾಂದೇಡ್‌ ಹಾಗೂ ವಿದರ್ಭದ ತಿಪ್ಪೇಶ್ವರ ವನ್ಯಜೀವಿ ಅಭಯಾರಣ್ಯದ ನಡುವೆ ಪ್ರಸ್ತುತ ಎರಡು ಹುಲಿ ಸಂಚರಿಸುತ್ತಿವೆ. ಇದು ಈ ಭಾಗದಲ್ಲಿರುವ ಕಾಡಿನ ಆರೋಗ್ಯದ ಸಂಕೇತವಾಗಿದೆ ಎನ್ನುತ್ತಾರೆ ಮುಂಡೆ. ‘ಬೆಳೆ ರಕ್ಷಣೆಗಾಗಿ ರೈತರು ಅಳವಡಿಸಿಕೊಂಡಿರುವ ಕಡಿಮೆ ತೀವ್ರತೆಯ ವಿದ್ಯುತ್‌ ತಂತಿ ಬೇಲಿ ಹೊರತುಪಡಿಸಿ ಇನ್ಯಾವುದೇ ರೀತಿಯ ಅಪಾಯ ಈ ಹುಲಿಗಳಿಗಿಲ್ಲ. ‘ರಾಮಲಿಂಗ್‌’ನ ಮೇಲ್ವಿಚಾರಣೆಗಾಗಿ ಗಸ್ತು ತಂಡಗಳನ್ನು ರಚಿಸಲಾಗಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.