ADVERTISEMENT

ಉತ್ತರ ಪ್ರದೇಶ: ಹುಲಿ ಮೇಲೆ ಟ್ರ್ಯಾಕ್ಟರ್‌ ಹರಿಸಿ ಕೊಂದ ಗ್ರಾಮಸ್ಥರು

ಏಜೆನ್ಸೀಸ್
Published 5 ನವೆಂಬರ್ 2018, 11:28 IST
Last Updated 5 ನವೆಂಬರ್ 2018, 11:28 IST
   

ಲಖನೌ:ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿದ್ದ ಹುಲಿಯನ್ನು ಉತ್ತರ ಪ್ರದೇಶದ ಗ್ರಾಮವೊಂದರ ಜನರು ಭಾನುವಾರ ಅಟ್ಟಾಡಿಸಿ ಹೊಡೆದು ಕೊಂದಿದ್ದಾರೆ. ನರಭಕ್ಷಕ ಹುಲಿ ‘ಅವನಿ’ಯನ್ನು ಗುಂಡಿಕ್ಕಿ ಕೊಂದಿದ್ದ ಬೆನ್ನಲೇ ಮತ್ತೊಂದು ಹುಲಿಯ ಸಾವಿನ ಸುದ್ದಿ ಚರ್ಚೆಗೆ ಗ್ರಾಸವಾಗಿದೆ.

ಲಖನೌನಿಂದ 210 ಕಿ.ಮೀ. ದೂರದ ದುಧ್ವಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 50 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ಮೇಲೆ ಹುಲಿ ದಾಳಿ ಮಾಡಿದ್ದು, ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರಿಂದ ಕುಪಿತರಾದ ಗ್ರಾಮದ ಜನರು ಸಂರಕ್ಷಿತ ಪ್ರದೇಶದ ಒಳಗೆ ನುಗ್ಗಿ ಅರಣ್ಯ ರಕ್ಷಕರನ್ನು ಬಡಿದು, ಕಣ್ಣಿಗೆ ಬಿದ್ದ 10 ವರ್ಷದ ಹೆಣ್ಣು ಹುಲಿ ಮೇಲೆ ಟ್ರ್ಯಾಕ್ಟರ್‌ ಹರಿಸಿದ್ದಾರೆ. ಗಾಯಗೊಂಡ ಹುಲಿಗೆ ಕೋಲುಗಳನ್ನು ಬಳಸಿ ಬಲವಾಗಿ ಹೊಡೆದಿದ್ದಾರೆ.

ವ್ಯಕ್ತಿ ಕಾಡಿನ ಹಾದಿ ದಾಟುತ್ತ ತನ್ನ ಗ್ರಾಮಕ್ಕೆ ತೆರಳುವಾಗ ಹುಲಿ ದಾಳಿ ನಡೆಸಿದೆ. ಇದಾದ ಬಳಿಕ ಕೆಲವು ಸಮಾಜ ವಿರೋಧಿ ಶಕ್ತಿಗಳು ಜತೆಗೂಡಿ ಹುಲಿಯನ್ನು ಸಾಯುವವರೆಗೂ ಹೊಡೆದಿದ್ದಾರೆ. ಇದರಲ್ಲಿ ಭಾಗಿಯಾದವರನ್ನು ಗುರುತಿಸಲಾಗಿದ್ದು, ಅವರ ವಿರುದ್ಧ ಎಫ್‌ಐಆರ್‌ ದಾಖಲಿಸುತ್ತಿದ್ದೇವೆ ಎಂದು ದುಧ್ವಾ ರಾಷ್ಟ್ರೀಯ ಉದ್ಯಾನದ ನಿರ್ದೇಶಕ ಮಹಾವಿರ್‌ ಕೊಜಿಲಾಂಗಿ ಹೇಳಿದ್ದಾರೆ.

ADVERTISEMENT

ಹುಲಿ ಸಂರಕ್ಷಿತ ಪ್ರದೇಶದಲ್ಲಿಯೇ ಗ್ರಾಮಸ್ಥರು ವಾಸಿಸುತ್ತಿದ್ದು, ಕಳೆದ 10 ವರ್ಷಗಳಲ್ಲಿ ಹುಲಿ ಯಾವುದೇ ವ್ಯಕ್ತಿಯ ಮೇಲೆ ದಾಳಿ ನಡೆಸಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಎರಡು ವಾರಗಳಿಂದ ಹುಲಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿತ್ತು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದೆವು ಎಂದು ಗ್ರಾಮಸ್ಥರು ದೂರಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

2014ರ ಹುಲಿ ಗಣತಿಯ ಪ್ರಕಾರ, ದೇಶದಲ್ಲಿರುವ ಹುಲಿಗಳ ಸಂಖ್ಯೆ 2,226.ಗ್ರಾಮಸ್ಥರು ಕೊಂದ ಹುಲಿಯ ಚಿತ್ರವನ್ನು ನಟ ರಣದೀಪ್‌ ಹೂಡಾ ಟ್ವೀಟಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ 13 ಜನರ ಸಾವಿಗೆ ಕಾರಣವಾಗಿದೆ ಎನ್ನಲಾದಹುಲಿ ‘ಅವನಿ’ಯನ್ನು ಶುಕ್ರವಾರ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಹುಲಿ 10 ತಿಂಗಳ ಎರಡು ಮರಿಗಳ ಜತೆಗೆ ವಾಸಿಸುತ್ತಿತ್ತು. ನರಭಕ್ಷಕ ಹಣೆಪಟ್ಟಿ ಕಟ್ಟಿಕೊಂಡಿದ್ದರಿಂದ ಇದನ್ನು ಜೀವಂತವಾಗಿ ಸೆರೆ ಹಿಡಿಯುವ ಪ್ರಯತ್ನಗಳು ನಡೆದಿದ್ದವು. ಜನ ಭೀತಿಗೊಂಡಿದ್ದರಿಂದ ಹುಲಿಯನ್ನು ಗುಂಡಿಕ್ಕಿ ಕೊಲ್ಲಲು ಸುಪ್ರೀಂ ಕೋರ್ಟ್‌ ಸೆಪ್ಟೆಂಬರ್‌ನಲ್ಲಿ ಆದೇಶ ನೀಡಿತ್ತು. ಅವನಿ ಹುಲಿ ಹತ್ಯೆಯ ಬಗ್ಗೆ ಭಾನುವಾರ ಕೇಂದ್ರ ಸಚಿವೆ ಮನೇಕಾ ಗಾಂಧಿ, ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತೀಕ್ಷವಾಗಿ ಪ್ರತಿಕ್ರಿಯಿಸಿದ್ದರು. ಕಾಂಗ್ರೆಸ್‌ ಅಧ್ಯಕ್ಷರಾಹುಲ್ ಗಾಂಧಿ ಪ್ರಾಣಿಗಳ ಹಕ್ಕುಗಳ ಕುರಿತ ಸಂದೇಶವೊಂದನ್ನು ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.