ADVERTISEMENT

ನಿರ್ಭಯಾ ಹಂತಕರ ನೇಣಿಗೆ ದಿನಗಣನೆ

ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಸದ್ಯವೇ ಗಲ್ಲು?; ಉತ್ತರ ಪ್ರದೇಶ ಸರ್ಕಾರಕ್ಕೆ ಫ್ಯಾಕ್ಸ್ ಕಳಿಸಿದ ತಿಹಾರ್ ಜೈಲು ಅಧಿಕಾರಿಗಳು

ಪಿಟಿಐ
Published 13 ಡಿಸೆಂಬರ್ 2019, 11:44 IST
Last Updated 13 ಡಿಸೆಂಬರ್ 2019, 11:44 IST
   

ಲಖನೌ: ಅಪರಾಧಿಗಳನ್ನು ನೇಣಿಗೆ ಹಾಕುವ ಸಲುವಾಗಿ ಇಬ್ಬರು ಸಿಬ್ಬಂದಿಯನ್ನು ಕಳುಹಿಸಿಕೊಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ದೆಹಲಿಯ ತಿಹಾರ್ ಜೈಲು ಆಡಳಿತ ಮನವಿ ಮಾಡಿದೆ.ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧತೆ ನಡೆಯುತ್ತಿದೆ ಎಂಬ ವರದಿಗಳಿಗೆ ಈ ಬೆಳವಣಿಗೆ ಪುಷ್ಟಿ ನೀಡಿದೆ.

ತಿಹಾರ್ ಜೈಲಿನಿಂದ ಡಿಸೆಂಬರ್ 9ರಂದುಈ ಸಂಬಂಧ ಫ್ಯಾಕ್ಸ್ ಬಂದಿದ್ದು, ನೇಣಿಗೇರಿಸುವ ಸಿಬ್ಬಂದಿಯನ್ನು ಕಳುಹಿಸಿಕೊಡಲಾಗುವುದು ಎಂದುಉತ್ತರ ಪ್ರದೇಶ ಕಾರಾಗೃಹ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಆನಂದ್ ಕುಮಾರ್ ಹೇಳಿದ್ದಾರೆ. ಈ ಕೆಲಸ ಮಾಡುವ ಇಬ್ಬರ ಪೈಕಿ ಪವನ್ ಜಲ್ಲದ್ ಎಂಬುವರು ಮೀರಠ್ ಜೈಲಿನ ಸಿಬ್ಬಂದಿ. ಮತ್ತೊಬ್ಬರು ಲಖನೌ ಜೈಲಿನಲ್ಲಿ ಕರ್ತವ್ಯದಲ್ಲಿದ್ದಾರೆ.

ಯಾವ ಅಪರಾಧಿಗಳನ್ನು ಗಲ್ಲಿಗೇರಿಸಲಾಗುವುದು ಎಂಬ ಮಾಹಿತಿ ಪತ್ರದಲ್ಲಿ ಇಲ್ಲ. ನೇಣಿಗೇರಿಸುವ ಅಗತ್ಯ ಬೀಳಬಹುದು ಎಂಬ ಕಾರಣ ನೀಡಿ, ಮನವಿ ಸಲ್ಲಿಸಲಾಗಿದೆ. ಜೈಲಿನ ಕೆಲವು ಅಪರಾಧಿಗಳು ಗರಿಷ್ಠ ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅವರಿಗೆ ಇರುವ ಎಲ್ಲ ಆಯ್ಕೆಗಳೂ ಮುಗಿದಿವೆ ಎಂದು ಉಲ್ಲೇಖಿಸಲಾಗಿದೆ.

ADVERTISEMENT

ಮರು ಪರಿಶೀಲನೆ ಅರ್ಜಿ ವಿಚಾರಣೆ: 2012ರ ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಕ್ಷಯ್ ಕುಮಾರ್ ಸಿಂಗ್ ಎಂಬಾತ ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ (ಡಿ.17) ವಿಚಾರಣೆ ನಡೆಸಲಿದೆ.

ಮುಕೇಶ್‌ ಸಿಂಗ್‌, ವಿನಯ್‌ ಶರ್ಮಾ, ಪವನ್ ಕುಮಾರ್ ಈ ಮೊದಲು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಗಳನ್ನು 2018ರ ಜುಲೈ 19ರಂದು ಕೋರ್ಟ್‌ ವಜಾಗೊಳಿಸಿತ್ತು.

ಮುಕೇಶ್‌ ಸಿಂಗ್‌, ವಿನಯ್‌ ಶರ್ಮಾ ಹಾಗೂ ಅಕ್ಷಯ್‌ ತಿಹಾರ್‌ ಜೈಲಿನಲ್ಲಿದ್ದು,ಮಂಡೋಲಿ ಜೈಲಿನಲ್ಲಿದ್ದ ಪವನ್‌ ಕುಮಾರ್‌ ಗುಪ್ತ ಎಂಬುವನನ್ನು ತಿಹಾರ್‌ ಜೈಲಿಗೆ ಮಂಗಳವಾರ ಸ್ಥಳಾಂತರಿಸಲಾಗಿದೆ.ಪ್ರಕರಣದ ಆರು ಆರೋಪಿಗಳ ಪೈಕಿರಾಮ್‌ ಸಿಂಗ್‌ ಎಂಬಾತ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ.ಬಂಧನಕ್ಕೊಳಗಾಗಿದ್ದ ಇನ್ನೊಬ್ಬ ಬಾಲಾಪರಾಧಿಯು ಮೂರು ವರ್ಷ ರಿಮಾಂಡ್‌ ಹೋಂನಲ್ಲಿದ್ದು, ಬಿಡುಗಡೆ ಆಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.