ADVERTISEMENT

ಜಿಲ್ಲಾಧಿಕಾರಿಯ ಹಸು ಚಿಕಿತ್ಸೆಗೆ 7 ಪಶು ವೈದ್ಯರ ನಿಯೋಜನೆ: ಇಬ್ಬರ ಅಮಾನತು 

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 14:38 IST
Last Updated 13 ಜೂನ್ 2022, 14:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಲಖನೌ: ಅನಾರೋಗ್ಯ ಪೀಡಿತ ಹಸುವಿನ ಚಿಕಿತ್ಸೆಗೆ ಏಳು ಪಶುವೈದ್ಯರನ್ನು ನಿಯೋಜಿಸಲಾಗಿತ್ತು. ಹಸುವಿನ ಮಾಲೀಕ ಬೇರೆ ಯಾರೂ ಅಲ್ಲ, ಜಿಲ್ಲಾಧಿಕಾರಿ. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಅಶಿಸ್ತು ಆರೋಪದ ಮೇರೆಗೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಯಿತು.

ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾದ ಜಿಲ್ಲಾಧಿಕಾರಿ ಅಪೂರ್ವ ದುಬೆಗೆ ಸೇರಿದ ಹಸುವಿನ ಆರೋಗ್ಯದ ಮೇಲ್ವಿಚಾರಣೆ ಮತ್ತು ಚಿಕಿತ್ಸೆಗಾಗಿ ಏಳು ಪಶುವೈದ್ಯರನ್ನು ನೇಮಿಸುವಂತೆ ಲಿಖಿತ ನಿರ್ದೇಶನ ಬಂದಿತ್ತು ಎಂದು ಫತೇಪುರ್ ಜಿಲ್ಲೆಯ ಮುಖ್ಯ ಪಶುವೈದ್ಯಾಧಿಕಾರಿ ಎಸ್.ಕೆ.ತಿವಾರಿ ಹೇಳಿದರು.

‘ನಿತ್ಯ ಒಬ್ಬ ಪಶು ವೈದ್ಯರು ಎರಡು ಬಾರಿ ಜಿಲ್ಲಾಧಿಕಾರಿ ನಿವಾಸಕ್ಕೆ ಭೇಟಿ ನೀಡಿ ಹಸುವಿಗೆ ಚಿಕಿತ್ಸೆ ನೀಡಬೇಕು. ಸಂಜೆ ಆರು ಗಂಟೆಗೆ ಆರೋಗ್ಯದ ಬಗ್ಗೆ ವರದಿ ಮಾಡಬೇಕು. ಈ ಕೆಲಸದಲ್ಲಿ ಯಾವುದೇ ಲೋಪದೋಷ ತೋರಿದರೆ ಕ್ಷಮಿಸುವುದಿಲ್ಲ’ ಎಂದುತಿವಾರಿ ಹೊರಡಿಸಿರುವ ಪತ್ರ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅವರು ಸರ್ಕಾರದ ಕೆಂಗಣ್ಣಿಗೆ ಗುರಿಯಾದರು.

ADVERTISEMENT

ಪತ್ರದಿಂದ ಮುಜುಗರಕ್ಕೊಳಗಾದ ಡಿ.ಸಿ, 'ಅಶಿಸ್ತಿನ' ಆರೋಪದ ಮೇಲೆ ಮುಖ್ಯ ಪಶುವೈದ್ಯಾಧಿಕಾರಿ ಸೇರಿದಂತೆ ಇಬ್ಬರನ್ನು ಅಮಾನತುಗೊಳಿಸಿದರು.

'ನನ್ನ ಕುಟುಂಬದ ಬಳಿ ಹಸುಗಳಿಲ್ಲ' ಎಂದು ಸ್ಪಷ್ಟಪಡಿಸಿರುವ ಜಿಲ್ಲಾಧಿಕಾರಿ, ‘ಇಬ್ಬರು ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನನ್ನ ವರ್ಚಸ್ಸು ಹಾಳು ಮಾಡಲು ಪ್ರಯತ್ನಿಸಿ, ಪತ್ರವನ್ನು ವೈರಲ್ ಮಾಡಿದ್ದಾರೆ. ಒಂದೂವರೆ ವರ್ಷಗಳಲ್ಲಿ ಇಬ್ಬರು ಅಧಿಕಾರಿಗಳ ವಿರುದ್ಧ ಹಲವಾರು ದೂರುಗಳನ್ನು ಸ್ವೀಕರಿಸಿದ್ದೇನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.