ADVERTISEMENT

ರಕ್ಷಣಾ ಕ್ಷೇತ್ರದಲ್ಲಿ ಭಾರತವು ಸ್ವಾವಲಂಬಿಯಾಗುವ ಸಮಯ ಇದಾಗಿದೆ: ರಾಜನಾಥ್‌ ಸಿಂಗ್

ಏಜೆನ್ಸೀಸ್
Published 10 ಆಗಸ್ಟ್ 2020, 15:17 IST
Last Updated 10 ಆಗಸ್ಟ್ 2020, 15:17 IST
   

ನವದೆಹಲಿ: ಸ್ಥಳೀಯವಾಗಿ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಹಾಗೂ ದೇಶವನ್ನು ಸ್ವಾವಲಂಬಿಯನ್ನಾಗಿಸುವ ಸಮಯ ಇದಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಸೋಮವಾರ ಅಭಿಪ್ರಾಯಪಟ್ಟಿದ್ದಾರೆ.

‘ಆತ್ಮನಿರ್ಭರ್ ಸಪ್ತಾಹ’ ಕುರಿತ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಂಗ್‌, ಭವಿಷ್ಯದಲ್ಲಿ ರಕ್ಷಣಾ ವಿಭಾಗ, ಹೂಡಿಕೆ ಮೂಲಸೌಕರ್ಯ ಹಾಗೂಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

‘ಈ ದಿನದ ಕಾರ್ಯಕ್ರಮವು ಸ್ಥಳೀಯ ಉತ್ಪಾದನಾ ಸಾಮರ್ಥ್ಯ ವೃದ್ಧಿಗೆ ನೆರವಾಗುವ ಆಧುನೀಕರಣ, ಉನ್ನತೀಕರಣ ಮತ್ತು ಹೊಸ ಮೂಲಭೂತ ಸೌಕರ್ಯಗಳ ಮೇಲೆ ಕೇಂದ್ರೀಕೃತವಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಕೇಂದ್ರ ಸರ್ಕಾರವು, ವಿದೇಶದಿಂದ ಆಮದು ಮಾಡಿಕೊಳ್ಳಬೇಕಿದ್ದ 101 ಸರಕುಗಳನ್ನು ನಿಷೇಧಿಸಿ, ಅದರ ‍ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿತ್ತು. ‘ಇದೇ ಮೊದಲ ಬಾರಿಗೆ ಭಾರತವು ಆಮದು ಮಾಡಿಕೊಳ್ಳದ 101 ಸರಕುಗಳ ಪಟ್ಟಿಯನ್ನು ಹೊರತಂದಿದ್ದೇವೆ. ಇದನ್ನು ನಾವು ನೆಗೆಟಿವ್‌ ಲಿಸ್ಟ್‌ ಎನ್ನಲಿದ್ದೇವೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

‘ಮುಂದಿನ ದಿನಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಮದು ವೆಚ್ಚ ಉಳಿಯುವುದರಿಂದ ನಮ್ಮ ಶಸ್ತ್ರಾಸ್ತ್ರಗಳ ಪಟ್ಟಿಗೆ ಮತ್ತಷ್ಟು ಸರಕುಗಳು ಸೇರ್ಪಡೆಗೊಳ್ಳಲಿವೆ. ಸಾರ್ವಜನಿಕ ವಲಯದ ಕಂಪೆನಿಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿವೆ. ಇವು ನಮ್ಮ ಸೇನಾ ಪಡೆಗಳ ಬೆನ್ನೆಲುಬಾಗಲಿವೆ’ ಎಂದೂ ಹೇಳಿದ್ದಾರೆ.

ಒಂದು ವೇಳೆ ನಾವು ಭಾರತದಲ್ಲಿಯೇ ಉತ್ಪಾದಿಸುವಂತಾದರೆ, ಸಾಕಷ್ಟು ಬಂಡವಾಳವನ್ನು ಉಳಿಸಲಿದ್ದೇವೆ. ಆ ಮೂಲಕ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲು ಸಾಧ್ಯವಾಗಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.