ADVERTISEMENT

ಆಗ ಬ್ರಿಟಿಷರ ಹೆದರಿಸಿದ ಟಿಪ್ಪು ಈಗ ಅವರ ಗುಲಾಮರನ್ನು ಹೆದರಿಸುತ್ತಿದ್ದಾರೆ: ಒವೈಸಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 11:01 IST
Last Updated 9 ಅಕ್ಟೋಬರ್ 2022, 11:01 IST
ಅಸಾದುದ್ದೀನ್‌ ಒವೈಸಿ ಮತ್ತು ಟಿಪ್ಪು ಸುಲ್ತಾನ್‌ ಚಿತ್ರ
ಅಸಾದುದ್ದೀನ್‌ ಒವೈಸಿ ಮತ್ತು ಟಿಪ್ಪು ಸುಲ್ತಾನ್‌ ಚಿತ್ರ    

ಹೈದರಾಬಾದ್‌: ‘ಬದುಕಿದ್ದಾಗ ಬ್ರಿಟಿಷರನ್ನು ಹೆದರಿಸಿದ್ದ ಟಿಪ್ಪು ಸುಲ್ತಾನ್‌ ಈಗ ಬ್ರಿಟಿಷರ ಗುಲಾಮರನ್ನು ಹೆದರಿಸುತ್ತಿದ್ದಾರೆ. ಟಿಪ್ಪು ಪರಂಪರೆಯನ್ನು ಅಳಿಸಲು ಬಿಜೆಪಿಗೆ ಸಾಧ್ಯವಿಲ್ಲ’ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್‌ ಒವೈಸಿ ಹೇಳಿದ್ದಾರೆ.

ಮೈಸೂರು–ಬೆಂಗಳೂರು ನಡುವೆ ಸಂಚರಿಸುತ್ತಿರುವ ‘ಟಿಪ್ಪು ಎಕ್ಸ್‌ಪ್ರೆಸ್‌’ ರೈಲಿನ ಹೆಸರನ್ನು ‘ಒಡೆಯರ್ ಎಕ್ಸ್‌ಪ್ರೆಸ್‌’ ಎಂದು ಮರುನಾಮಕರಣ ಮಾಡಿ ಕೇಂದ್ರ ರೈಲ್ವೆ ಮಂಡಳಿ ಶುಕ್ರವಾರ ಆದೇಶ ಹೊರಡಿಸಿತ್ತು.

ADVERTISEMENT

ಈ ಹಿನ್ನೆಲೆಯಲ್ಲಿ ಭಾನುವಾರ ಟ್ವೀಟ್‌ ಮಾಡಿರುವ ಅಸಾದುದ್ದೀನ್‌ ಒವೈಸಿ, ‘ಬಿಜೆಪಿ ಸರ್ಕಾರ ಟಿಪ್ಪು ಎಕ್ಸ್‌ಪ್ರೆಸ್ ಅನ್ನು ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಿದೆ. ಟಿಪ್ಪು ಬ್ರಿಟಿಷರ ವಿರುದ್ಧ ಮೂರು ಯುದ್ಧಗಳನ್ನು ಮಾಡಿದ್ದರು. ಈ ಕಾರಣಕ್ಕಾಗಿ ಬಿಜೆಪಿಯವರು ಕೆರಳಿದ್ದಾರೆ. ಇನ್ನೊಂದು ರೈಲಿಗೆ ಒಡೆಯರ್ ಹೆಸರಿಡಬಹುದಿತ್ತು. ಟಿಪ್ಪು ಪರಂಪರೆಯನ್ನು ಅಳಿಸಲು ಬಿಜೆಪಿಗೆ ಸಾಧ್ಯವಿಲ್ಲ. ಟಿಪ್ಪು ಬದುಕಿದ್ದಾಗ ಬ್ರಿಟಿಷರನ್ನು ಹೆದರಿಸಿದ್ದರು. ಈಗಲೂ, ಬ್ರಿಟಿಷ್ ಗುಲಾಮರನ್ನು ಹೆದರಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಮತ್ತೊಂದು ಟ್ವೀಟ್‌ ಮಾಡಿರುವ ಒವೈಸಿ, ‘ಟಿಪ್ಪು ಸುಲ್ತಾನ್‌ ಕುರಿತ ನನ್ನ ಟ್ವೀಟ್‌ನ ಮೂಲಕ ನಾನು ಅನಕ್ಷರಸ್ಥ ಸಂಘಿ-ಶಾಖಾ-ಪುತ್ರರನ್ನು ಪ್ರಚೋದಿಸಿದೆ ಎಂದು ಕಾಣುತ್ತದೆ. ಒಳ್ಳೆಯದು, ಇದು ಭಾರತದ ಸಂವಿಧಾನದ ಮೂಲ ಪ್ರತಿ. ಅದರಲ್ಲಿ ಹಜರತ್ ಟಿಪ್ಪುವಿನ ಭಾವಚಿತ್ರವಿದೆ. ನಮ್ಮ ಗಣರಾಜ್ಯದ ಸ್ಥಾಪಕರು ‘ಕ್ಷಮಾದಾನದ ಅರ್ಜಿ ಬರಹಗಾರ’ರು ಮತ್ತು ಬ್ರಿಟಿಷ್ ಗುಲಾಮರಿಗಿಂತಲೂ ಹೆಚ್ಚು ತಿಳಿದಿದ್ದರು’ ಎಂದು ಕೆಣಕಿದ್ದಾರೆ.

ಈ ಟ್ವೀಟ್‌ನೊಂದಿಗೆ ಅವರು ಸಂವಿಧಾನದಲ್ಲಿರುವ ಟಿಪ್ಪು ಚಿತ್ರವನ್ನು ಹಂಚಿಕೊಂಡಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.