ತಿರುಪತಿಯಲ್ಲಿ ಕಾಲ್ತುಳಿತ
(ಪಿಟಿಐ ಚಿತ್ರ)
ತಿರುಪತಿ(ಆಂಧ್ರಪ್ರದೇಶ): ‘ಐದು ನಿಮಿಷ, ನಾವೆಲ್ಲಾ ಸತ್ತು ಹೋಗಿದ್ದೇವೆ ಎಂಬ ಭಾವನೆ ಮೂಡಿತ್ತು. ನಾನು ಕಳೆದ 25 ವರ್ಷಗಳಿಂದ ಈ ದೇವಸ್ಥಾನಕ್ಕೆ ಬರುತ್ತಿದ್ದೇನೆ. ಆದರೆ, ಈ ರೀತಿ ಎಂದೂ ಆಗಿರಲಿಲ್ಲ...’
–ಇದು, ಇಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನಕ್ಕಾಗಿ ಟಿಕೆಟ್ ಪಡೆಯುವ ವೇಳೆ ಉಂಟಾದ ನೂಕು ನುಗ್ಗಲು ಹಾಗೂ ಕಾಲ್ತುಳಿತದಲ್ಲಿ ಬದುಕುಳಿದಿರುವ ಭಕ್ತೆ, ಡಿ.ವೆಂಕಟಲಕ್ಷ್ಮಿ ಹೇಳುವ ಮಾತು.
ಸ್ಥಳೀಯ ಸುದ್ದಿವಾಹಿನಿ ಜೊತೆ ಮಾತನಾಡಿದ ಅವರು, ‘ಆರು ಜನ ಹುಡುಗರು ನನ್ನನ್ನು ಪಕ್ಕಕ್ಕೆ ಎಳೆದು ಬದುಕಿಸಿದರು. ನಂತರ, ಕುಡಿಯಲು ನೀರು ಕೂಡ ಕೊಟ್ಟರು’ ಎಂದು ಬುಧವಾರದ ಭೀಕರ ಕ್ಷಣಗಳನ್ನು ವಿವರಿಸಿದ್ದಾರೆ.
‘ಹಠಾತ್ತನೇ ಜನರು ಮುನ್ನುಗ್ಗಿದ್ದರಿಂದ ನೂಕು ನುಗ್ಗಲು ಉಂಟಾಯಿತು. ನಾನು ನಿಂತಿದ್ದ ಸ್ಥಳದಲ್ಲಿಯೇ 10 ಜನರು ಬಿದ್ದು, ಗಾಯಗೊಂಡರು. ಜೋರಾದ ಕಿರುಚಾಟ ಶುರುವಾಯಿತು. ಅಷ್ಟಾದರೂ ಜನರು ಬರುವುದು ನಿಲ್ಲಲಿಲ್ಲ. ದಟ್ಟಣೆಯನ್ನು ನಿಯಂತ್ರಿಸಲಾಗಲಿಲ್ಲ’ ಎಂದೂ ಅವರು ಹೇಳಿದ್ದಾರೆ.
‘ಭಕ್ತರು ಸಾಗುವುದಕ್ಕೆ ಪೊಲೀಸರು ವ್ಯವಸ್ಥಿತ ಕ್ರಮ ಕೈಗೊಂಡಿದ್ದಲ್ಲಿ, ಇಂತಹ ದುರ್ಘಟನೆ ಸಂಭವಿಸುತ್ತಿರಲಿಲ್ಲ. ಇನ್ನೊಂದೆಡೆ, ಆ ಸ್ಥಳದಲ್ಲಿ ಏನಾಗುತ್ತಿದೆ ಎಂಬುದು ಕೂಡ ಯಾರಿಗೂ ಗೊತ್ತಾಗಲಿಲ್ಲ’ ಎಂದು ವಿವರಿಸಿದ್ದಾರೆ.
‘ನಾನು ಬುಧವಾರ ಬೆಳಿಗ್ಗೆ 11ರ ವೇಳೆಗೆ ಇಲ್ಲಿಗೆ ಬಂದೆ. ಸಂಜೆ 7ಕ್ಕೆ ಬಾಗಿಲು ತೆರೆಯಿತು. ಭಕ್ತರು ಸಾಲಾಗಿ ಹೋಗುವಂತೆ ಒಬ್ಬ ಸಿಬ್ಬಂದಿ ಹೇಳಿದರು. ಆದರೆ, ಅವರ ಮಾತನ್ನು ಯಾರೂ ಕೇಳಲಿಲ್ಲ. ಪೊಲೀಸರು ಕೂಡ ಹೊರಗಡೆಯೇ ಇದ್ದರು’ ಎಂದು ಮತ್ತೊಬ್ಬ ಭಕ್ತೆ ಹೇಳಿದ್ದಾರೆ.
‘5 ಸಾವಿರ ಜನರು ಜಮಾಯಿಸಿದ್ದಾರೆ ಎಂಬುದಾಗಿ ಪೊಲೀಸರಿಗೆ ತಿಳಿಸುವಂತೆ ಭಕ್ತರೊಬ್ಬರು ಸೂಚಿಸಿದರು. ಈ ವೇಳೆ, ಪೊಲೀಸರು ದಿಢೀರ್‌ನೆ ಬಾಗಿಲುಗಳನ್ನು ತೆಗೆದಿದ್ದರಿಂದ ಕಾಲ್ತುಳಿತ ಉಂಟಾಯಿತು’ ಎಂದೂ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.