ADVERTISEMENT

ತಿಮ್ಮಪ್ಪನ ಆಸ್ತಿ ₹2.26 ಲಕ್ಷ ಕೋಟಿ: 10.3 ಟನ್‌ ಚಿನ್ನ, ₹15.9 ಕೋಟಿ ನಗದು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 6:59 IST
Last Updated 6 ನವೆಂಬರ್ 2022, 6:59 IST
   

ತಿರುಪತಿ (ಆಂಧ್ರ ಪ್ರದೇಶ): ವಿಶ್ವ‌ದಲ್ಲೇ ಅತ್ಯಂತ ಶ್ರೀಮಂತ ದೇಗುಲ ಎನಿಸಿಕೊಂಡಿರುವ ತಿರುಪ‍ತಿ ವೆಂಕಟೇಶ್ವರ ದೇಗುಲದ ಆಡಳಿತ ಮಂಡಳಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ತನ್ನ ಆಸ್ತಿ ಘೋಷಣೆ ಮಾಡಿಕೊಂಡಿದೆ.

ಚರಾಸ್ಥಿ, ಸ್ಥಿರಾಸ್ತಿ ಸೇರಿ ತನ್ನ ಬಳಿ ಒಟ್ಟು ₹2.26 ಲಕ್ಷ ಕೋಟಿಯಷ್ಟು ಆಸ್ತಿ ಇದೆ ಎಂದು ಟಿಟಿಡಿ ಹೇಳಿಕೊಂಡಿದೆ. ಈ ಸಂಬಂಧ ಪ್ರಕಟ ಮಾಡಿರುವ ಶ್ವೇತಪತ್ರದಲ್ಲಿ ತನ್ನ ಆಸ್ತಿಯ ವಿವರಗಳನ್ನು ಘೋಷಿಸಿಕೊಂಡಿದೆ.

ಸದ್ಯ ಟಿಟಿಡಿ ಬಳಿ ಇರುವ ಒಟ್ಟು ಆಸ್ತಿ 2022–23ನೇ ಸಾಲಿನ ಕರ್ನಾಟಕದ ಬಜೆಟ್‌ಗಿಂತ ಅಲ್ಪ ಕಡಿಮೆ ಅಷ್ಟೇ. 2022–23ರ ಕರ್ನಾಟಕ ಬಜೆಟ್‌ನ ಗಾತ್ರ ₹2.65 ಲಕ್ಷ ಕೋಟಿ.

ADVERTISEMENT

ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಒಟ್ಟು 10.3 ಟನ್‌ನಷ್ಟು ಬಂಗಾರ ಠೇವಣಿ ಇದೆ. ಇದರ ಒಟ್ಟು ಮೌಲ್ಯ 5,300 ಕೋಟಿ ರೂ. ಸುಮಾರು 15,938 ಕೋಟಿಯಷ್ಟು ನಗದು ಠೇವಣಿ ಇದೆ. ದೇಶಾದ್ಯಂತ 960 ಕಡೆ 7,123 ಎಕರೆ ಭೂಮಿ ಟ್ರಸ್ಟ್‌ ಹೆಸರಿನಲ್ಲಿ ಇದೆ ಎಂದು ಶ್ವೇತಪತ್ರದಲ್ಲಿ ನೀಡಿದ ಮಾಹಿತಿಯಿಂದ ಗೊತ್ತಾಗಿದೆ.

ಭೂಮಿಯ ಒಟ್ಟು ಮಾರುಕಟ್ಟೆ ಮೌಲ್ಯ ₹2 ಲಕ್ಷ ಕೋಟಿಗೂ ಅಧಿಕ ಇರಬಹುದು ಎಂದು ಅಂದಾಜಿಸಲಾಗಿದೆ.

2019ರಲ್ಲಿ 13,025 ಕೋಟಿ ರೂ. ಇದ್ದ ನಿಶ್ಚಿತ ಠೇವಣಿ ಈಗ ₹15,938 ಕೋಟಿಗೆ ಏರಿಕೆಯಾಗಿದೆ. ಕೇವಲ ಮೂರು ವರ್ಷಗಳಲ್ಲಿ ಕೋವಿಡ್‌ ಸಾಂಕ್ರಾಮಿಕದ ಹೊರತಾಗಿಯೂ ₹2,900 ಕೋಟಿ ಹೆಚ್ಚಳವಾಗಿದೆ ಎನ್ನುವುದು ಗಮನಾರ್ಹ.

2019ರಲ್ಲಿ 7.3ರ ಟನ್‌ನಷ್ಟಿದ್ದ ಬಂಗಾರದ ದಾಸ್ತಾನು 2020ರ ವೇಳೆಗೆ 2.9 ಟನ್‌ನಷ್ಟು ಏರಿಕೆಯಾಗಿ 10.3 ಟನ್‌ನಷ್ಟು ಇದೆ.

ಇನ್ನು ಇದೇ ವೇಳೆ ಹೆಚ್ಚುವರಿ ಆದಾಯವನ್ನು ಆಂಧ್ರ ಪ್ರದೇಶ ಸರ್ಕಾರದ ಭದ್ರತಾ ಠೇವಣಿಗಳಲ್ಲಿ ಹೂಡಿಕೆ ಮಾಡಲಾಗುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಷಯ ಸತ್ಯಕ್ಕೆ ದೂರವಾದ ಸಂಗತಿ ಎಂದು ಟಿಟಿಡಿ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.