
ನವದೆಹಲಿ: ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯು(ಎಸ್‌ಐಆರ್) ಸಾಫ್ಟ್‌ವೇರ್ ಮೂಲಕ ನಡೆಯುವ ಸಮಗ್ರ ಅಕ್ರಮವಾಗಿ ಬದಲಾಗಿದೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಮಂಗಳವಾರ ಟೀಕಿಸಿದೆ.
ಪಾರದರ್ಶಕವಾಗಿ ಮತ್ತು ಗೊಂದಲ ರಹಿತವಾಗಿ ಎಸ್‌ಐಆರ್ ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಬೆನ್ನಲ್ಲೇ, ಚುನಾವಣಾ ಆಯೋಗದ ವಿರುದ್ಧ ಟಿಎಂಸಿ ವಾಗ್ದಾಳಿ ನಡೆಸಿದೆ. ಅಭಿಷೇಕ್ ಬ್ಯಾನರ್ಜಿ ನೇತೃತ್ವದ ಟಿಎಂಸಿ ನಿಯೋಗವು ಚುನಾವಣಾ ಆಯೋಗದೊಂದಿಗೆ ಡಿಸೆಂಬರ್ 31ರಂದು ನಡೆಸಿದ ಸಭೆಯ ನಡಾವಳಿಯನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದೆ.
‘ಚುನಾವಣಾ ಆಯೋಗ ಎನ್ನುವುದು ದೇಶದ ಅತ್ಯುನ್ನತ ಸಂಸ್ಥೆ. ಇದು ಹಲವು ದಶಕಗಳಿಂದ ಪ್ರಜಾಪ್ರಭುತ್ವದ ಅಸ್ತಿತ್ವವನ್ನು ಗಟ್ಟಿಗೊಳಿಸಿದೆ. ಆದರೆ ಈಗ ಏನಾಗಿದೆ, ಇಂಥ ಸಂಸ್ಥೆ ನಾಶವಾಗುತ್ತಿದೆ. ಅದರ ಪಾರದರ್ಶಕತೆಯನ್ನು ಬಯಸುತ್ತಿದ್ದೇವೆ. ಮಾನವೀಯ, ಪಾರದರ್ಶಕ ಮತ್ತು ಯೋಜನಾಬದ್ಧ ಎಸ್‌ಐಆರ್ ಜೊತೆಗೆ ನಾವಿದ್ದೇವೆ’ ಎಂದು ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಎಂದು ಹೇಳಿದ್ದಾರೆ.
‘ಮುಖ್ಯ ಚುನಾವಣಾ ಆಯುಕ್ತರಿಗೆ ನಿರ್ದಿಷ್ಟ ಜವಾಬ್ದಾರಿಯಿದೆ. ಅದರ ಬದಲು ಅವರು ಮರದಂಡನೆ ವಿಧಿಸುವವರು ಮತ್ತು ಗಲ್ಲಿಗೇರಿಸುವವರು ಆಗಬಾರದು. ಚುನಾವಣಾ ಪ್ರಕ್ರಿಯೆಯನ್ನು ಸಾಮಾನ್ಯ ಜನರಿಗೆ ಹೊರೆಯಾಗುವಂತೆ ಯಾಕೆ ನಡೆಸಲಾಗುತ್ತಿದೆ’ ಎಂದು ಪ್ರಶ್ನಿಸಿದ್ದಾರೆ.
‘ಪೋಷಕರ ಹೆಸರು, ಮತದಾರರರು ಮತ್ತು ಅವರ ಪೋಷಕರ ವಯಸ್ಸಿನಲ್ಲಿನ ವ್ಯತ್ಯಾಸಗಳನ್ನು ಉಲ್ಲೇಖಿಸಿ, 1.25 ಕೋಟಿ ಜನರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಎಸ್‌ಐಆರ್‌ಗೆ ಯಾಕೆ ಸಾಫ್ಟ್‌ವೇರ್ ಬಳಸಲಾಗುತ್ತಿದೆ? ಅದನ್ನು ಯಾಕೆ ನಿಯಮಿತವಾಗಿ ಪರಿಷ್ಕರಿಸಲಾಗುತ್ತಿದೆ’ ಎಂದು ಪ್ರಶ್ನಿಸಿದರು.
‘ಆಯೋಗ ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು ಹೊರತು ರಾಜಕೀಯ ಪಕ್ಷದ ಪರವಾಗಿ ಅಲ್ಲ. ಮತಕಳವು ಮಾಡುವುದು ಅದರ ಕರ್ತವ್ಯವಲ್ಲ’ ಎಂದು ಟಿಎಂಸಿ ಸಂಸದೆ ಸಾಗರಿಕಾ ಘೋಷ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.