ADVERTISEMENT

ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ಪಕ್ಷಾಂತರ: ಬಿಜೆಪಿ ಸೇರಿದ ಟಿಎಂಸಿ ಶಾಸಕ  

ಏಜೆನ್ಸೀಸ್
Published 29 ಮೇ 2019, 11:54 IST
Last Updated 29 ಮೇ 2019, 11:54 IST
   

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿಇಬ್ಬರು ಟಿಎಂಸಿ ಶಾಸಕರು ಬಿಜೆಪಿಗೆ ಸೇರಿದ ಬೆನ್ನಿಗೇ ಬುಧವಾರ ಕೂಡ ಅಲ್ಲಿ ಪಕ್ಷಾಂತರ ನಡೆದಿದೆ. ಆಡಳಿತ ಪಕ್ಷದ ಮುಸ್ಲಿಂ ನಾಯಕ ತಮ್ಮ ಮೂವರು ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಟಿಎಂಸಿಯ ಶಾಸಕರಾಗಿ ಆಯ್ಕೆಯಾಗಿದ್ದ ಮನಿರುಲ್‌ ಇಸ್ಲಾಮ್‌ ಅವರು ತಮ್ಮ ಬೆಂಬಲಿಗರಾದ ಗದ್ದರ್‌ ಹಜ್ರಾ, ಮೊಮಮದ್‌ ಆಸಿಫ್‌ ಇಕ್ಬಾಲ್‌ ಮತ್ತು ನಿಮಾಯ್‌ ದಾಸ್‌ ಅವರೊಂದಿಗೆ ಬಿಜೆಪಿ ಸೇರಿದರು.

ಇದಕ್ಕೂ ಹಿಂದೆ ಮಂಗಳವಾರ (ಮೇ 28) ಟಿಎಂಸಿಯ ಸುಬ್ರಾನ್ಶು ರಾಯ್‌, ತುಷಾರ್‌ ಕಾಂತಿ ಭಟ್ಟಾಚಾರ್ಯ, ಸಿಪಿಎಂನ ದೇವೇಂದ್ರ ರಾಯ್‌ ಅವರು 50–60 ಕಾರ್ಪೊರೇಟರ್‌ಗಳೊಂದಿಗೆ ಬಿಜೆಪಿ ಸೇರ್ಪಡೆಗೊಂಡಿದ್ದರು. ಸುಬ್ರಾನ್ಶು ರಾಯ್‌ ಅವರು ಬಿಜೆಪಿಯ ಮುಕುಲ್‌ ರಾಯ್‌ ಅವರ ಪುತ್ರನಾಗಿದ್ದು, ಹಲವು ದಿನಗಳ ಹಿಂದೆಯೇ ಪಕ್ಷದಿಂದ ಅಮಾನತುಗೊಂಡಿದ್ದರು.

ADVERTISEMENT

ಪಶ್ಚಿಮ ಬಂಗಾಳದಲ್ಲಿ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆದಂತೆಯೇ ಪಕ್ಷಾಂತರವೂ ಏಳು ಹಂತಗಳಲ್ಲಿ ನಡೆಯಲಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ ಅವರು ಹೇಳಿಕೊಂಡಿದ್ದರು.

ಇನ್ನು ಪಕ್ಷಾಂತರದ ಕುರಿತು ನಿನ್ನೆಯಷ್ಟೇ ಟ್ವೀಟ್‌ ಮಾಡಿದ್ದ ಟಿಎಂಸಿ‘ನಮ್ಮಿಂದ ಅಮಾನತಾದ ಒಬ್ಬ ಶಾಸಕನನ್ನು ಬಿಜೆಪಿ ಸೆಳೆದುಕೊಂಡಿದೆ. ಇನ್ನುಳಿದವರು ಕಾಂಗ್ರೆಸ್‌ ಮತ್ತು ಸಿಪಿಎಂನವರು. ಇನ್ನು ನಮ್ಮಿಂದ ಹೋಗಿ ಬಿಜೆಪಿ ಸೇರಿದ ಕಾರ್ಪೊರೇಟರ್‌ಗಳ ಸಂಖ್ಯೆ 6 ಮಾತ್ರ. ಅದೂ ಗನ್‌ ಪಾಯಿಂಟ್‌ನಲ್ಲಿ ಅವರನ್ನು ಕರೆದುಕೊಂಡು ಹೋಗಲಾಗಿದೆ,’ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.