ADVERTISEMENT

ಪಕ್ಷದೊಂದಿಗಿರುವ ಭಿನ್ನಾಭಿಪ್ರಾಯದ ಬಗ್ಗೆ ‘ಸುಳಿವು’ ನೀಡಿದ ಟಿಎಂಸಿ ಸಂಸದೆ

ಪಿಟಿಐ
Published 15 ಜನವರಿ 2021, 9:10 IST
Last Updated 15 ಜನವರಿ 2021, 9:10 IST
ಸತಾಬ್ದಿ ರಾಯ್‌ (ಸಂಗ್ರಹ ಚಿತ್ರ)
ಸತಾಬ್ದಿ ರಾಯ್‌ (ಸಂಗ್ರಹ ಚಿತ್ರ)   

ಕೋಲ್ಕತ್ತಾ: ‘ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣ ಮೂಲ ಕಾಂಗ್ರೆಸ್‌ ಪಕ್ಷದಲ್ಲಿ ಸಮಸ್ಯೆಗಳಿದ್ದು,ಈ ಕುರಿತು ಶನಿವಾರ ಒಂದು ನಿರ್ಧಾರಕ್ಕೆ ಬರುತ್ತೇನೆ‘ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂ‌ಲಕ ಪಶ್ಚಿಮ ಬಂಗಾಳದ ಬೀರ್‌ಭೂಮ್‌ ಕ್ಷೇತ್ರದ ಸಂಸದೆ ಸತಾಬ್ದಿ ರಾಯ್‌ ಅವರು ‘ಮಹತ್ವದ ಬೆಳವಣಿಗೆ’ಯೊಂದು ನಡೆಯುುವುದರ ಬಗ್ಗೆ ಸುಳಿವು ನೀಡಿದ್ದಾರೆ.

ನವದೆಹಲಿಗೆ ಪ್ರಯಾಣ ಬೆಳೆಸುತ್ತಿರುವ ಸತಾಬ್ದಿ ಅವರು, ‘ನಾನು ಯಾವುದೇ ನಿರ್ಧಾರ ತೆಗೆದುಕೊಂಡರೂ, ಶನಿವಾರ(ಜ.16) ಮಧ್ಯಾಹ್ನ 2 ಗಂಟೆಗೆ ನಿಮಗೆ(ಸಾರ್ವಜನಿಕರಿಗೆ) ತಿಳಿಸುತ್ತೇನೆ‘ ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ನಟಿ ಹಾಗೂ ಸಂಸದೆ ಸತಾಬ್ದಿ ರಾಯ್ ಅವರು, ‘ನನ್ನ ಕ್ಷೇತ್ರದಲ್ಲಿ ನಡೆಯುವ ಪಕ್ಷದ ಯಾವುದೇ ಕಾರ್ಯಕ್ರಮಗಳ ಬಗ್ಗೆ ನನಗೆ ಮಾಹಿತಿ ನೀಡುತ್ತಿಲ್ಲ. ಇದು ನನಗೆ ಮಾನಸಿಕವಾಗಿ ತೀವ್ರ ನೋವು ಉಂಟು ಮಾಡಿದೆ‘ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಟಿಎಂಸಿಯಲ್ಲಿ ನಾಯಕರ ‘ನಿರ್ಗಮನ ಪರ್ವ‘ ಮುಂದುವರಿದಿರುವ ಸಮಯದಲ್ಲಿ ಸತಾಬ್ದಿಯವರ ಈ ಹೇಳಿಕೆ ಪಕ್ಷದಲ್ಲಿ ತಳಮಳ ಉಂಟು ಮಾಡಿದೆ. ಮೂಲಗಳ ಪ್ರಕಾರ, ಸತಾಬ್ದಿ ರಾಯ್ ಮತ್ತು ಬೀರ್‌ಭೂಮ್ ಜಿಲ್ಲೆಯ ಟಿಎಂಸ್ ಮುಖ್ಯಸ್ಥೆ ಅನುಬ್ರತಾ ಮೊಂಡಲ್ ನಡುವೆ ಸೂಕ್ತ ಹೊಂದಾಣಿಕೆಯ ಕೊರತೆ ಇಷ್ಟೆಲ್ಲ ಬೆಳವಣಿಗೆಗೆ ಕಾರಣ ಎನ್ನಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಸತಾಬ್ದಿ ರಾಯ್ ಅವರೊಂದಿಗೆ ಪಕ್ಷ ಚರ್ಚಿಸಲಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

‘ನಾನು ಕ್ಷೇತ್ರದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದೇನೆ. ಆದರೂ ಏತಕ್ಕಾಗಿ ಕ್ಷೇತ್ರದೊಳಗೆ ನಡೆಯುವ ಪಕ್ಷದ ಕಾರ್ಯಕ್ರಮಗಳು ನನಗೆ ತಿಳಿಯುವುದಿಲ್ಲ‘ ಎಂದು ಸತಾಬ್ದಿ ಪ್ರಶ್ನಿಸಿದ್ದಾರೆ.

ಈ ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್‌ ರಾಯ್ ಅವರದ್ದೇ ಎಂದು ಖಚಿತಪಡಿಸಿಕೊಳ್ಳಲು ಅವರನ್ನು ಸಂಪರ್ಕಿಸಿದಾಗ, ಆ ಪೋಸ್ಟ್ ತನ್ನದೇ ಎಂದು ಸತಾಬ್ದಿ ಖಚಿತಪಡಿಸಿದ್ದಾರೆ.

ಟಿಎಂಸಿ ಪಕ್ಷದಲ್ಲಿ ರಾಯ್ ಅಲ್ಲದೇ, ಮತ್ತೊಬ್ಬ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ರಾಜಿಬ್ ಬ್ಯಾನರ್ಜಿ ಅವರು ಪಕ್ಷದೊಂದಿಗೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಪೋಸ್ಟ್ ಮಾಡಿರುವ ಅವರು, ಶನಿವಾರದೊಳಗೆ ಫೇಸ್‌ಬುಕ್‌ ಲೈವ್‌ನಲ್ಲಿ ತನ್ನ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.

ಕಳೆದ ವರ್ಷದ ಡಿಸೆಂಬರ್ 19ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಮೇದಿನಪುರದಲ್ಲಿ ನಡೆಸಿದ ರ‍್ಯಾಲಿಯಲ್ಲಿ ಟಿಎಂಸಿ ಪಕ್ಷದ ಪ್ರಮುಖ ನಾಯಕ ಸುವೇಂದು ಅಧಿಕಾರಿ ಸೇರಿದಂತೆ 35 ಮಂದಿ ಪಕ್ಷದ ಮುಖಂಡರು ಬಿಜೆಪಿ ಸೇರಿದ್ದರು. ಅದರಲ್ಲಿ ಐವರು ಶಾಸಕರು ಮತ್ತು ಒಬ್ಬರು ಸಂಸದರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.