ADVERTISEMENT

ಎಸ್‌ಜಿ ಹುದ್ದೆಯಿಂದ ತುಷಾರ್‌ ಕೈಬಿಡಲು ಪ್ರಧಾನಿಗೆ ಪತ್ರ

ಸುವೇಂದು ಅಧಿಕಾರಿಯೊಂದಿಗೆ ಭೇಟಿ ಆರೋಪ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 20:50 IST
Last Updated 2 ಜುಲೈ 2021, 20:50 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಅವರನ್ನು ಹುದ್ದೆಯಿಂದ ಕೈಬಿಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಮೂವರು ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.

ನಾರದಾ ಹಾಗೂ ಶ್ರದ್ಧಾ ಚಿಟ್‌ ಫಂಡ್‌ ಹಗರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರನ್ನುತುಷಾರ್‌ ಮೆಹ್ತಾ ಅವರು ಭೇಟಿ ಮಾಡಿದ್ದಾರೆ ಎನ್ನಲಾಗಿದ್ದು, ಈ ನಡೆಯನ್ನು ಟಿಎಂಸಿ ಸಂಸದರಾದ ಡೆರೆಕ್‌ ಒಬ್ರಿಯನ್, ಸುಖೇಂದು ಶೇಖರ್ ರಾಯ್‌ ಹಾಗೂ ಮಹುವಾ ಮೊಯಿತ್ರಾ ಪ್ರಶ್ನಿಸಿದ್ದಾರೆ.

ಸುವೇಂದು ಅವರು ವಿವಿಧ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಭ್ರಷ್ಟಾಚಾರ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ. ಅಂಥವರೊಂದಿಗಿನ ಸಾಲಿಸಿಟರ್‌ ಜನರಲ್ ಭೇಟಿಯು ಆ ಹುದ್ದೆಯ ಶಾಸನಬದ್ಧ ಕರ್ತವ್ಯ ಹಾಗೂ ಹಿತಾಸಕ್ತಿಗಳ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಪ್ರಧಾನಿಗೆ ಬರೆದ ಜಂಟಿ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

ಮೆಹ್ತಾ ಅವರ ನಡೆ ಅಸಮರ್ಪಕವಷ್ಟೇ ಅಲ್ಲ; ಅದು ಸಾಲಿಸಿಟರ್‌ ಜನರಲ್‌ ಹುದ್ದೆಗೂ ಕಳಂಕ ತರುವಂಥದು ಎಂದು ಆರೋಪಿಸಿದ್ದಾರೆ.

ಆದರೆ, ಗುರುವಾರ ಮಧ್ಯಾಹ್ನ 3 ಗಂಟೆಗೆ ತಮ್ಮ ಗೃಹಕಚೇರಿಗೆ ಸುವೇಂದು ಅಧಿಕಾರಿ ಬಂದಿದ್ದನ್ನು ಒಪ್ಪಿಕೊಂಡಿರುವ ಮೆಹ್ತಾ, ಅವರೊಂದಿಗಿನ ಭೇಟಿಯನ್ನು ಅಲ್ಲಗಳೆದಿದ್ದಾರೆ.

‘ಆ ವೇಳೆ, ನನ್ನ ಕಚೇರಿಯಲ್ಲಿ ಪೂರ್ವನಿಗದಿಯಾದ ಸಭೆಯಲ್ಲಿ ನಾನು ಭಾಗವಹಿಸಿದ್ದರಿಂದ, ಸುವೇಂದು ಅವರಿಗೆ ನನ್ನ ಕಚೇರಿಯಲ್ಲಿಯೇ ಕಾಯುವಂತೆ ಸಿಬ್ಬಂದಿಯುತಿಳಿಸಿದ್ದಾರೆ.

ಸಭೆ ಮುಗಿದ ಮೇಲೆ ನನ್ನ ಸಹಾಯಕ, ಸುವೇಂದು ಬಂದಿರುವ ಮಾಹಿತಿ ನೀಡಿದರು. ಅವರನ್ನು ಭೇಟಿ ಮಾಡಲು ಸಾಧ್ಯವಾಗದು ಹಾಗೂ ಕಾಯಬೇಕಾಗಿ ಬಂದಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾಗಿಯೂ ತಿಳಿಸುವಂತೆ ಅವರಿಗೆ ತಿಳಿಸಿದೆ. ಸುವೇಂದು ನನ್ನನ್ನು ಭೇಟಿಯಾಗದೇ ಅಲ್ಲಿಂದ ತೆರಳಿದ್ದಾರೆ’ ಎಂದು ಮೆಹ್ತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.