ಟಿಎಂಸಿ
ಕೋಲ್ಕತ್ತ (ಪಿಟಿಐ): ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿಯಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆದಿದೆ ಎನ್ನಲಾದ ದೌರ್ಜನ್ಯ ಹಾಗೂ ಜಮೀನು ಕಬಳಿಕೆ ಪ್ರಕರಣದ ನೈಜ ಘಟನೆಗಳ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಿಳಿಸುವುದು ಪಕ್ಷಕ್ಕೆ ಅನಿವಾರ್ಯವಾಗಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶನಿವಾರ ತಿಳಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪಶ್ಚಿಮ ಬಂಗಾಳ ಸಚಿವ, ಟಿಎಂಸಿ ನಾಯಕ ಶಶಿ ಪಂಜ ‘ಬಿಜೆಪಿಯು ಸಂದೇಶ್‌ಖಾಲಿಯಿಂದ ಗುಂಪೊಂದನ್ನು ಕರೆದುಕೊಂಡು ಹೋಗಿ ಸ್ವತಃ ರಾಷ್ಟ್ರಪತಿಗಳ ಎದುರೇ ಸಂದೇಶ್‌ಖಾಲಿ ಕುರಿತು ಸುಳ್ಳು ಚಿತ್ರಣ ನೀಡಿದ್ದಾರೆ. ನಮ್ಮ ಪರವಾಗಿ ಸಂದೇಶ್‌ಖಾಲಿಯಿಂದ ಗುಂಪೊಂದನ್ನು ಕರೆದುಕೊಂಡು ಹೋಗುವ ಅವಶ್ಯಕತೆ ಇದೆ ಎಂದು ನಾನು ಭಾವಿಸುತ್ತೇನೆ. ಸಂದೇಶ್‌ಖಾಲಿಯಲ್ಲಿ ನಿಜಕ್ಕೂ ಏನಾಯಿತು ಎಂಬುದರ ಕುರಿತು ರಾಷ್ಟ್ರಪತಿಗಳಿಗೆ ತಿಳಿಸುವ ಅವಶ್ಯಕತೆಯಿದೆ‘ ಎಂದು ತಿಳಿಸಿದರು.
‘ರಾಷ್ಟ್ರಪತಿಯವರನ್ನು ಭೇಟಿ ಮಾಡಿದ ಬಿಜೆಪಿ ತಂಡ ದಾರಿ ತಪ್ಪಿಸಿದೆ. ಕೇಸರಿ ಪಾಳಯ ಅಂದು, ಇಂದೂ ಸುಳ್ಳು ಹೇಳುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಪಕ್ಷದ ನಾಯಕತ್ವ ಒಪ್ಪಿಗೆ ನೀಡಿದರೆ ರಾಷ್ಟ್ರಪತಿ ಅವರನ್ನು ಭೇಟಿ ಮಾಡುತ್ತೇವೆ’ ಎಂದಿದ್ದಾರೆ.
ಸ್ಥಳೀಯ ಟಿಎಂಸಿ ನಾಯಕರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡುವಂತೆ ಸಂದೇಶ್‌ಖಾಲಿ ಮಹಿಳೆಯರಿಗೆ ಬಿಜೆಪಿ ಹಣ ನೀಡಿದೆ ಎಂದು ಟಿಎಂಸಿ ಆರೋಪಿಸಿದೆ. ಈ ನಡುವೆ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಬಿಜೆಪಿ ಹಣ ನೀಡಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾದ ಆಡಿಯೊವೊಂದು ಹರಿದಾಡಿದೆ. ಆದರೆ, ಇದರ ಸತ್ಯಾಸತ್ಯತೆ ತಿಳಿದುಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.