ಟಿಎಂಸಿ
ಕೋಲ್ಕತ್ತ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಸಮಯದಲ್ಲಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿರುವುದು ಕಂಡುಬಂದರೆ ಕಾನೂನು ಹೋರಾಟದ ಮತ್ತು ಸಾಮೂಹಿಕ ಚಳವಳಿ ನಡೆಸುವ ಎಚ್ಚರಿಕೆಯನ್ನು ಟಿಎಂಸಿ ಶುಕ್ರವಾರ ನೀಡಿದೆ.
ಪಕ್ಷದ ಸುಮಾರು 15,000 ಪದಾಧಿಕಾರಿಗಳು ಭಾಗವಹಿಸಿದ್ದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ‘ಮುಂಬರುವ ಚುನಾವಣೆಯಲ್ಲಿ ಯಾರಿಗೂ ತಿಳಿಯದಂತೆ ‘ಮೋಸ’ ಎಸಗಲು ಬಿಜೆಪಿಯು ಎಸ್‌ಐಆರ್ ಪ್ರಕ್ರಿಯೆಯನ್ನು ಬಳಸುತ್ತಿದೆ’ ಎಂದು ಆರೋಪಿಸಿದರು.
‘ಚುನಾವಣಾ ಆಯೋಗವು ಬಿಜೆಪಿಯ ಸೂಚನೆಯಂತೆ ಎಸ್‌ಐಆರ್ ನಡೆಸುತ್ತಿದ್ದು, ಬಂಗಾಳದಲ್ಲೂ ಈ ಪ್ರಕ್ರಿಯೆ ಕೈಗೆತ್ತಿಕೊಳ್ಳುವುದಾಗಿ ಘೋಷಿಸಿದೆ. ಬಿಹಾರದಲ್ಲಿ ಎಸ್‌ಐಆರ್ ಘೋಷಣೆಯಾದಾಗ ನಾವು ಸಂಸತ್ತಿನಲ್ಲಿ ಮತ್ತು ಬೀದಿಗಳಲ್ಲಿ ಪ್ರತಿಭಟಿಸಿದ್ದೇವೆ. ಅದನ್ನು ಮುಂದುವರಿಸುತ್ತೇವೆ’ ಎಂದು ಬ್ಯಾನರ್ಜಿ ಹೇಳಿದ್ದಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಟಿಎಂಸಿ ನಾಯಕರೊಬ್ಬರು ತಿಳಿಸಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿರುವುದರಿಂದ ರಾಜ್ಯದಾದ್ಯಂತ ‘ಭಯದ ವಾತಾವರಣ’ ಸೃಷ್ಟಿಯಾಗಿದೆ ಎಂದು ಬ್ಯಾನರ್ಜಿ ಆರೋಪಿಸಿದರು.
‘ನೈಜ ಮತದಾರರ ಹೆಸರು ಅಳಿಸಿ ಹಾಕಿದರೆ ನಾವು ಸುಮ್ಮನಿರುವುದಿಲ್ಲ. ನ್ಯಾಯಾಲಯದ ಮೊರೆ ಹೋಗುವುದು ಮಾತ್ರವಲ್ಲದೆ, ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ’ ಎಂದು ಸಭೆಯಲ್ಲಿದ್ದ ಮುಖಂಡರಿಗೆ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.